ನವದೆಹಲಿ, ಅ.10(Daijiworld News/SS): ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಶುಕ್ರವಾರ ಭಾರತಕ್ಕೆ ಆಗಮಿಸಲಿದ್ದು, ಜಿನ್ಪಿಂಗ್ ಸಂಚರಿಸುವ ಮಾರ್ಗ ಮತ್ತು ಮಹಾಬಲಿಪುರಂನಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ.
ತಮಿಳುನಾಡಿನ ಐತಿಹಾಸಿಕ ಪಟ್ಟಣ ಮಹಾಬಲಿಪುರಂನಲ್ಲಿ ಪ್ರಧಾನಿ ನರೇಂದ್ರ ಮೋದಿ ಜತೆ ಎರಡನೇ ಅನೌಪಚಾರಿಕ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಜಿನ್ಪಿಂಗ್ ಜತೆ ಚೀನಾ ವಿದೇಶಾಂಗ ಸಚಿವ ವಾಂಗ್ ಯೀ ಇನ್ನಿತರ ಮುಖಂಡರು ಆಗಮಿಸಲಿದ್ದಾರೆ. ಪ್ರಧಾನಿ ಮೋದಿ ಜತೆಯಲ್ಲಿ ವಿದೇಶಾಂಗ ಸಿಚಿವ ಎಸ್. ಜೈಶಂಕರ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಭಾಗವಹಿಸಲಿದ್ದಾರೆ.
ಜಮ್ಮು- ಕಾಶ್ಮೀರದ ಲಡಾಖ್ನಲ್ಲಿ ಇತ್ತೀಚೆಗೆ ಭಾರತ ಮತ್ತು ಚೀನಾ ಸೈನಿಕರು ಮುಖಾಮುಖಿಯಾಗಿದ್ದರು. ಜಮ್ಮು- ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದು ವಿಚಾರವನ್ನು ಚೀನಾ ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ಬಹಿರಂಗವಾಗಿ ಟೀಕಿಸಿತ್ತು. ಈ ಹಿನ್ನೆಲೆಯಲ್ಲಿ ಅನೌಪಚಾರಿಕ ಸಭೆ ಮಹತ್ವ ಪಡೆದುಕೊಂಡಿದೆ.
ನೌಕಾ ಪಡೆ ಮತ್ತು ಕರಾವಳಿ ರಕ್ಷಣಾ ಪಡೆ ಕೂಡ ಮಹಾಬಲಿಪುರಂ ಕರಾವಳಿಯಲ್ಲಿ ಗಸ್ತು ಹೆಚ್ಚಿಸಿವೆ. ಮಹಾಬಲಿಪುರಂ ಐತಿಹಾಸಿಕ ದೇವಾಲಯಗಳಿಗೆ ಅ. 8 ಮತ್ತು 13ರವರೆಗೆ ಸಾರ್ವಜನಿಕರ ಭೇಟಿಯನ್ನು ಭಾರತೀಯ ಪುರಾತತ್ವ ಸರ್ವೆಕ್ಷಣಾಲಯ ನಿಷೇಧಿಸಿದೆ.