ಕೊಚ್ಚಿನ್ ಅ 10 (Daijiworld News/MSP): ತಡರಾತ್ರಿ ಯುವಕನೋರ್ವ ತನ್ನ ಪ್ರಿಯತಮೆಯ ಮನೆಗೆ ತೆರಳಿ ಆಕೆಯನ್ನು ಬೆಂಕಿಹಚ್ಚಿ ಕೊಲೆಗೈದ ಆಘಾತಕಾರಿ ಘಟನೆ ಅ. 09 ರ ಬುಧವಾರ ನಡೆದಿದೆ. ಪ್ರಿಯತಮೆಯ ಮೃತಪಟ್ಟ ತಕ್ಷಣ ಯುವಕನೂ ಬೆಂಕಿ ಹಚ್ಚಿ ಆತ್ಮಹತ್ಯೆಗೈದಿದ್ದಾನೆ.
ಕಾಕ್ಕನಾಡ್ ಸಮೀಪದ ಅತ್ತಾಣಿ ಸಲಫಿ ಜುಮಾ ಮಸೀದಿಯ ಸಮೀಪ ನಿವಾಸಿಗಳಾದ ಶಾಲನ್ ಹಾಗೂ ಮೋಲಿ ದಂಪತಿಗಳ ಪುತ್ರಿ ದೇವಿಕಾ (17) ಕೊಲೆಯಾದ ನತದೃಷ್ಟ ಯುವತಿ. ಬುಧವಾರ ರಾತ್ರಿ 12:15ಕ್ಕೆ ಈ ಹೃದಯ ವಿದ್ರಾವಕ ಘಟನೆ ನಡೆದಿದ್ದು ಆತ್ಮಹತ್ಯೆಗೈದ ಯುವಕನನ್ನು ನಿತಿನ್ ಎಂದು ಗುರುತಿಲಾಗಿದೆ.
ತಡರಾತ್ರಿ ತನ್ನ ದ್ವಿಚಕ್ರ ವಾಹನದಲ್ಲಿ ದೇವಿಕಾಳ ಮನೆಗೆ ಬಂದ ನಿತಿನ್ ಮನೆ ಬಾಗಿಲನ್ನು ಒಂದೇ ಸಮನೆ ಬಡಿದ್ದಾನೆ. ಎಚ್ಚರಗೊಂಡ ಆಕೆಯ ಪೋಷಕರು ಬಾಗಿಲು ತೆರೆದಿದ್ದಾರೆ ಹಾಗೂ ವಿಚಾರಿಸಿದ್ದಾರೆ. ನಿತಿನ್ ತನ್ನ ಪ್ರಿಯತಮೆ ದೇವಿಕಾಳನ್ನು ನೋಡಬೇಕೆಂದು ಏಕಾಏಕಿ ಪಟ್ಟುಹಿಡಿದ ಕಾರಣ ದೇವಿಕಾ ನಿದ್ದೆ ಕಣ್ಣಿನಿಂದ ಎದ್ದು ಬಂದಿದ್ದಾಳೆ. ತಕ್ಷಣ ನಿತಿನ್ ತನ್ನ ಪಕ್ಕದಲ್ಲಿದ್ದ ಪೆಟ್ರೋಲ್ ನ್ನು ಆಕೆಯ ಮೇಲೆ ಸುರಿದು ಬೆಂಕಿ ಹಚ್ಚಿದ್ದಾನೆ. ಬೊಬ್ಬೆ ಕೇಳಿ ರಕ್ಷಣೆಗೆ ಧಾವಿಸಿದ ನೆರೆಮನೆಯವರ ಸಮ್ಮುಖದಲ್ಲಿ ಯುವಕನೂ ಬೆಂಕಿ ಹಚ್ಚಿಕೊಂಡಿದ್ದಾನೆ. ಆಸ್ಪತ್ರೆ ಧಾರಿ ಮಧ್ಯೆ ಇಬ್ಬರೂ ಅಸುನೀಗಿದ್ದಾರೆ ಎಂದು ಘಟನೆಯ ಬಗ್ಗೆ ಪ್ರತ್ಯಕ್ಷದರ್ಶಿಗಳು ಪೋಲಿಸರಿಗೆ ತಿಳಿಸಿದ್ದಾರೆ. ದೇವಿಕಾಳನ್ನು ರಕ್ಷಿಸುವ ಪ್ರಯತ್ನದಲ್ಲಿ ಆಕೆಯ ಪೋಷಕರಿಗೂ ಸುಟ್ಟ ಗಾಯಗಳಾಗಿವೆ ಹಾಗೂ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರೇಮ ನಿರಾಕರಣೆಯೇ ದೇವಿಕಾಳನ್ನು ಕೊಲೆಗೈಯಲು ಕಾರಣವಾಯಿತು ಎಂದು ಅಂದಾಜಿಸಲಾಗಿದೆ.