ನವದೆಹಲಿ, ಅ.10 (DaijiworldNews/AK): ಫ್ಲೈದುಬೈ ವಿಮಾನದಲ್ಲಿ ಭಾರತೀಯ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಮೇಲೆ ನಡೆದ ದಾಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವಂತೆ ಕೇಂದ್ರ ಸರ್ಕಾರ ಸೂಚಿಸಿದೆ.

1073 ಸಂಖ್ಯೆಯ ಫ್ಲೈದುಬೈ ಫ್ಲೈಟ್ ಸೆ.30 ರಂದು ಬೆಳಗ್ಗೆ 7.05ಕ್ಕೆ (ಗಲ್ಫ್ ಸಮಯದ ಪ್ರಕಾರ) ದುಬೈನಿಂದ ಹೊರಟಿತ್ತು. ಭಾರತೀಯ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ವಿಮಾನದ ಕ್ಯಾಪ್ಟನ್ ಆಗಿದ್ದರೆ, ಒಮಾನ್ನ ಪ್ರಜೆ ಸಹ ಪೈಲಟ್ ಆಗಿದ್ದರು. ವಿಮಾನದಲ್ಲಿ 174 ಪ್ರಯಾಣಿಕರು ಹಾಗೂ 6 ಸಿಬ್ಬಂದಿ ಕೂಡ ಪ್ರಯಾಣಿಸುತ್ತಿದ್ದರು. ಜೋರ್ಡಾನ್ – ಸೌದಿ ಅರೇಬಿಯಾ ಗಡಿ ಸಮೀಪದಲ್ಲಿ ವಿಮಾನ ಹಾರಾಟ ನಡೆಸುತ್ತಿದ್ದಾಗ ಏಕಾಏಕಿ ವೇಗವಾಗಿ ಕೆಳಕ್ಕೆ ಇಳಿದಿದ್ದು, ಬಳಿಕ ಸೌದಿ ಅರೇಬಿಯಾ ವಾಯುಪ್ರದೇಶದತ್ತ ತಿರುಗಿತ್ತು.
ವಿಮಾನದಲ್ಲಿದ್ದ ಪ್ರಯಾಣಿಕರು ನೀಡಿದ ಮಾಹಿತಿಯ ಪ್ರಕಾರ, ಒಮಾನ್ನ ಫಸ್ಟ್ ಆಫೀಸರ್ (ಸಹ ಪೈಲಟ್), ಕ್ಯಾಪ್ಟನ್ ಸ್ಮಿತ್ ಮಚ್ಚಾರ್ಗೆ ಮೊದಲು ತಲೆಗೆ ಬಲವಾಗಿ ಹೊಡೆದಿದ್ದಲ್ಲದೇ, ಚೂರಿಯಿಂದ ಇರಿದಿದ್ದ. ವಿಮಾನವನ್ನು ಅಪಹರಿಸುವ ಅಥವಾ ಪತನಗೊಳಿಸುವ ಉದ್ದೇಶದಿಂದ ಈ ದಾಳಿ ನಡೆಸಿದ್ದ ಎಂದು ಹೇಳಿದದ್ದರು. ದಾಳಿಯ ಬಳಿಕ ಪ್ರಯಾಣಿಕರು ಮತ್ತು ಇತರ ಸಿಬ್ಬಂದಿ ಒಮಾನ್ ಪೈಲಟ್ನನ್ನ ನಿಯಂತ್ರಿಸಿದರು, ಬಳಿಕ ಆತನನ್ನ ಬಂಧಿಸಲಾಯಿತು. ದಾಳಿಯಲ್ಲಿ ಮಚ್ಚಾರ್ ತಲೆ ಹಾಗೂ ಕೈಗಳಿಗೆ ಭಾರೀ ಗಾಯಗಳಾಗಿತ್ತು ಎಂದು ಕೇಂದ್ರ ಸರ್ಕಾರದ ತಿಳಿಸಿದೆ.
ಘಟನೆಯ ಬಳಿಕ ವಿಮಾನದಲ್ಲಿದ್ದ ಇತರ ಫ್ಲೈದುಬೈ ಪೈಲಟ್ಗಳು ವಿಮಾನದ ನಿಯಂತ್ರಣ ವಹಿಸಿಕೊಂಡು, ಸೌದಿ ಅರೇಬಿಯಾದ ವಾಯವ್ಯ ಭಾಗದಲ್ಲಿರುವ ತಬೂಕ್ನ ಪ್ರಿನ್ಸ್ ಸುಲ್ತಾನ್ ಬಿನ್ ಅಬ್ದುಲಅಜೀಜ್ ವಿಮಾನ ನಿಲ್ದಾಣದಲ್ಲಿ ಬೆಳಗ್ಗೆ 10.45ರ ಸುಮಾರಗೆ ವಿಮಾನವನ್ನ ಲ್ಯಾಂಡ್ ಮಾಡಿದ್ದಾರೆ. ನಂತರ ಒಮಾನಿ ಪೈಲಟ್ನನ್ನ ಸೌದಿ ಅಧಿಕಾರಿಗಳು ಬಂಧಿಸಿದ್ದಾರೆ ಎಂದು ಸರ್ಕಾರ ತಿಳಿಸಿದೆ.
ಹೀಗಾಗಿ ಘಟನೆ ಹಿಂದೆ ಯಾವುದೇ ದೊಡ್ಡ ಸಂಚು ಇದೆಯೇ ಎಂಬುದನ್ನ ಪತ್ತೆಹಚ್ಚಲು ಸಮಗ್ರ ತನಿಖೆಯ ಅಗತ್ಯವಿದೆ. ಆದ್ದರಿಂದ NIA ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವಂತೆ ಕೇಂದ್ರ ಸರ್ಕಾರ ಎನ್ಐಎಗೆ ನಿರ್ದೇಶನ ನೀಡಿದೆ.
ರಾಷ್ಟ್ರೀಯ ತನಿಖಾ ಸಂಸ್ಥೆ ಕಾಯ್ದೆ, 2008ರ ಸೆಕ್ಷನ್ 6ರ ಉಪವಿಭಾಗ 5 ಮತ್ತು 8 ಹಾಗೂ ಸೆಕ್ಷನ್ 8 ಅಡಿಯಲ್ಲಿ ತನಿಖೆ ನಡೆಸುವಂತೆ ಸರ್ಕಾರ ನಿರ್ದೇಶನ ನೀಡಿದೆ. ಘಟನೆಯ ಸಂಪೂರ್ಣ ಹಿನ್ನೆಲೆ, ವಿಮಾನದೊಳಗೆ ನಡೆದ ಬೆಳವಣಿಗೆಗಳು ಹಾಗೂ ಈ ದಾಳಿ ಯಾವುದೇ ದೊಡ್ಡ ಸಂಚಿನ ಭಾಗವಾಗಿತ್ತೇ ಎಂಬುದನ್ನು ಎನ್ಐಎ ತನಿಖೆ ನಡೆಸಲಿದೆ.