ನವದೆಹಲಿ, ಅ 10 (Daijiworld News/MSP): ಕೋಲಿನಿಂದ ಹೆಂಡತಿಯನ್ನು ಥಳಿಸುತ್ತಿದ್ದಾಗ ಐದು ತಿಂಗಳ ಗಂಡು ಮಗುವಿಗೆ ಪೆಟ್ಟು ಬಿದ್ದು ಎರಡು ದಿನಗಳ ಬಳಿಕ ಮಗು ಸಾವನ್ನಪ್ಪಿದ್ದ ಘಟನೆ ಪೂರ್ವ ದೆಹಲಿಯ ಕಾಂಡ್ಲಾದಲ್ಲಿ ನಡೆದಿದೆ.
ಮಗುವಿನ ಸಾವಿನ ನಂತರ ಪರಾರಿಯಾಗಿರುವ ಮಗುವಿನ ತಂದೆಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಭಾನುವಾರ ಕ್ಷುಲ್ಲಕ ವಿಚಾರಕ್ಕೆ ಗಂಡ ಹೆಂಡತಿ ನಡುವೆ ಜಗಳ ಆರಂಭವಾಗಿದೆ. ಈ ವೇಳೆ ಮಗುವಿನ ತಂದೆ ಮಗುವಿನ ತಾಯಿಗೆ ಕೋಲಿನಿಂದ ಥಳಿಸಲಾರಂಭಿಸಿದ್ದಾನೆ. ಈ ವೇಳೆ ಕೋಲಿಗೆ ಜೋಡಿಸಿದ್ದ ಕಬ್ಬಿಣ ತಾಗಿ ತಾಯಿಯ ಮಡಿಲಲ್ಲಿ ಮಲಗಿದ್ದ ಮಗುವಿನ ಹಣೆಗೆ ಬಡಿದು ರಕ್ತ ಸೋರಲಾರಂಭಿಸಿತ್ತು. ಆಗ ಗಾಬರಿಗೊಂಡ ದಂಪತಿಗಳು ಹತ್ತಿರದ ಕ್ಲಿನಿಕ್ಗೆ ಮಗುವನ್ನು ಚಿಕಿತ್ಸೆಗಾಗಿ ದಾಖಲಿಸಿದ್ದರು. ಈ ವೇಳೆ ಮಗುವಿನ ಹಣೆ ಮೇಲೆ ಇದ್ದ ಗಾಯ ಆಳವಾಗಿರದ ಕಾರಣ ವೈದ್ಯರು ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಯಿಂದ ಬಿಡುಗಡೆ ಮಾಡಿದ್ದರು.
ಮಂಗಳವಾರ ಬೆಳಗ್ಗೆ ಮಗು ಚೇತರಿಸಿಕೊಳ್ಳುತ್ತಿತ್ತು. ಆದರೆ, ಆ ಬಳಿಕ ಮತ್ತೊಮ್ಮೆ ದಂಪತಿಗಳಿಗೆ ಜಗಳವಾಗಿ ಪತಿ ಮಗುವನ್ನು ಎಸೆದಿದ್ದಾನೆ. ಆ ಬಳಿಕ ಮಗು ಜೋರಾಗಿ ಅಳಲಾರಂಭಿಸಿದಾಗ ಹೆತ್ತವರು ಮತ್ತೊಮ್ಮೆ ಕ್ಲಿನಿಕ್ಗೆ ಧಾವಿಸಿದರು. ವೈದ್ಯರು ಮಗುವಿನ ಸ್ಥಿತಿ ಗಂಭೀರವಾಗಿದೆ ಎಂದು ಹೇಳಿ ಖಾಸಗಿ ಆಸ್ಪತ್ರೆಗೆ ಮಗುವನ್ನು ಸೇರಿಸುವಂತೆ ತಿಳಿಸಿದರು. ಮಗುವನ್ನು ಪರೀಕ್ಷಿಸಿದ ಖಾಸಗಿ ಆಸ್ಪತ್ರೆ ವೈದ್ಯರು ಮಗು ಮೃತಪಟ್ಟಿದ್ದಾಗಿ ಘೋಷಿಸಿದರು.
ಅಂಬೆಗಾಲಿಡುವ ಮಗುವಿನ ಸಾವಿನ ಬಗ್ಗೆ ಅನುಮಾನಗೊಂಡ ಪೊಲೀಸ್ ತಂಡ ಆಸ್ಪತ್ರೆಗೆ ಧಾವಿಸಿ ಮಗುವಿನ ಮೃತದೇಹವನ್ನು ತಮ್ಮ ವಶಕ್ಕೆ ಪಡೆದು ಲಾಲ್ಬಹದ್ದೂರ್ ಆಸ್ಪತ್ರೆಗೆ ಸಾಗಿಸಿ ಶವಮಹಜರು ನಡೆಸಿದ್ದಾರೆ. ಈ ವೇಳೆ ತಲೆಯೊಳಗೆ ಅಂತರಿಕ ರಕ್ತಸ್ರಾವವಾಗಿ ಮಗು ಮೃತಪಟ್ಟಿರುವ ವಿಚಾರ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಬಹಿರಂಗವಾಯಿತು.
ಸುಮಾರು ಎರಡೂವರೆ ವರ್ಷಗಳ ಹಿಂದೆ ವಿವಾಹವಾಗಿದ್ದು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಇವರಿಗೆ ಐದು ತಿಂಗಳ ಒಂದೇ ಮಗುವಿತ್ತು. ಮಗುವಿನ ತಂದೆ ಗಾಝಿಯಾಬಾದ್ನ ಖಾಸಗಿ ಆಸ್ಪತ್ರೆಯಲ್ಲಿ ಆಪರೇಶನ್ ಥಿಯೇಟರ್ನ ಟೆಕ್ನಿಶಿಯನ್ ಆಗಿ ಕೆಲಸ ಮಾಡುತ್ತಿದ್ದು, ಕಳೆದ ಕೆಲವು ತಿಂಗಳುಗಳಿಂದ ಕೆಲಸವಿಲ್ಲದೇ ಮನೆಯಲ್ಲಿದ್ದ. ಮಗುವಿನ ತಾಯಿ ಖಾಸಗಿ ಕ್ಲಿನಿಕ್ನಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು.