ಬೆಂಗಳೂರು, ಅ 10 (DaijiworldNews/SM): ರಾಜ್ಯದಲ್ಲಿ ಭೀಕರ ಪ್ರವಾಹ ತಲೆದೋರಿದ ಬಳಿಕ ಹಾಗೂ ನೂತನ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಮೂರು ದಿನಗಳ ಕಾಲ ವಿಧಾನಸಭೆ ಅಧಿವೇಶನ ಆರಂಭಗೊಂಡಿದೆ.
ಸಮ್ಮಿಶ್ರ ಸರಕಾರ ಪತನದ ಬಳಿಕ ಬಿಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಆಡಳಿತಕ್ಕೆ ಬಂದ ಬಳಿಕ ನಡೆಯುವ ಮೊದಲ ಅಧಿವೇಶನ ಇದಾಗಿದೆ. ಇನ್ನು ಈ ಅಧಿವೇಶನಕ್ಕೂ ಮುನ್ನ ಪ್ರತಿಪಕ್ಷ ನಾಯಕರಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಆಯ್ಕೆಯಾಗಿದ್ದಾರೆ.
ಈ ನಡುವೆ ಗುರುವಾರದಂದು ಅಧಿವೇಶನ ಆರಂಬಗೊಂಡಾಗ ರಾಜ್ಯದ ಪ್ರವಾಹ ಪರಿಸ್ಥಿತಿ ಬಗ್ಗೆ ಚರ್ಚೆ ನಡೆಸಲು ಅವಕಾಶ ನೀಡುವಂತೆ ಪ್ರತಿಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್ ನಿಲುವಳಿ ಸೂಚನೆ ಮಂಡಿಸಿದವು. ಸಂತಾಪ ಸೂಚನೆ ಬಳಿಕ ಪ್ರವಾಹದ ಬಗ್ಗೆ ಚರ್ಚೆ ಆರಂಭಿಸಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಆಡಳಿ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.
ಅಧಿವೇಶನದ ಮೊದಲ ದಿನ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಿ ಕಲಾಪ ಮುಂದೂಡುವ ಸಂಪ್ರದಾಯವಿದೆ. ಆದರೆ, ಮೂರು ದಿನದ ಅಧಿವೇಶನ ಆದ್ದರಿಂದ ಸಂತಾಪ ಸೂಚನೆ ಬಳಿಕ ಕಲಾಪ ನಡೆಸಲು ಸ್ಫೀಕರ್ ಅವಕಾಶ ಮಾಡಿಕೊಟ್ಟರು.
ಇನ್ನು ಈ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರವಾಹ ಪರಿಸ್ಥಿತಿ ಬಗ್ಗೆ ಸುಧೀರ್ಘವಾಗಿ ಮಾತನಾಡಿದರು. ಹಾಗೂ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಪ್ರವಾಹ ಸಂತ್ರಸ್ತರಿಗೆ ಪರಿಹಾರ ನೀಡಿ ಎಂದು ಒತ್ತಾಯಿಸಿ ಬೃಹತ್ ಪ್ರತಿಭಟನೆ ಕೈಗೊಂಡಿದ್ದ ಕಾರಣ ಜೆಡಿಎಸ್ ಸದಸ್ಯರ ಬಲ ಸದನದಲ್ಲಿ ಕಡಿಮೆ ಇತ್ತು.
ಅಧಿವೇಶನ ವರದಿಗೆ ಖಾಸಗಿ ಮಾಧ್ಯಗಳಿಗೆ ನಿರ್ಬಂಧ ಹಾಕಿರುವ ವಿಚಾರದ ಬಗ್ಗೆ ಸದನದಲ್ಲಿ ಚರ್ಚೆ ನಡೆಯಿತು. ಪ್ರತಿಪಕ್ಷಗಳು ಮಾಧ್ಯಮಗಳನ್ನು ದೂರವಿಟ್ಟು ಸದನ ನಡೆಸುವ ಸರ್ಕಾರದ ತೀರ್ಮಾನವನ್ನು ಖಂಡಿಸಿದವು.