ಬೆಂಗಳೂರು, ಅ 10 (DaijiworldNews/SM): ರಾಜ್ಯದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ವಿಧಾನಸಭೆ ಅಧಿವೇಶನ ಆರಂಭಗೊಂಡಿದೆ. ವಿಪಕ್ಷ ನಾಯಕರಾಗಿ ಸಿದ್ದರಾಮಯ್ಯ ಸರಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದರೂ ಕೂಡ ಸದನದಲ್ಲಿ ಕನಕಪುರಬಂಡೆಯ ಅನುಪಸ್ಥಿತಿ ಎದ್ದು ಕಾಣುತ್ತಿದೆ.
ಇಂದಿನಿಂದ ಮೂರು ದಿನಗಳ ಕಾಲ ವಿಧಾನಮಂಡಲ ಅಧಿವೇಶನ ನಡೆಯುತ್ತಿದೆ. ಪ್ರತಿ ಸಂದರ್ಭದಲ್ಲೂ ಸದನದಲ್ಲಿ ಪವರ್ ಫುಲ್ ಆಗಿರುತ್ತಿದ್ದ ಮಾಜಿ ಪವರ್ ಮಿನಿಸ್ಟರ್ ಕದರ್ ಸದನದಲ್ಲಿಲ್ಲ ಎನ್ನುವುದು ಎದ್ದು ಕಾಣುತ್ತಿದೆ. ಕನಕಪುರ ಬಂಡೆ ಡಿಕೆಶಿ ಸದನದಲ್ಲಿ ಒಂದಲ್ಲ ಒಂದು ವಿಚಾರವಾಗಿ ಆಡಳಿತದಲ್ಲಿದ್ದರೆ, ವಿರೋಧ ಪಕ್ಷವನ್ನು ಹಾಗೂ ವಿರೋಧ ಪಕ್ಷದಲ್ಲಿದ್ದರೆ, ಆಡಳಿತ ಪಕ್ಷವನ್ನು ತರಾಟೆಗೆತ್ತಿಕೊಳ್ಳುತ್ತಾರೆ. ಹಾಗೂ ತಮ್ಮ ಪವರ್ ಸದನಕ್ಕೆ ಗೊತ್ತು ಪಡಿಸುತ್ತಾರೆ.
ಆದರೆ, ಇದೀಗ ಡಿಕೆಶಿ ತಿಹಾರ ಜೈಲಿನಲ್ಲಿ ತೆಪ್ಪಗೆ ಕುಳಿತುಕೊಂಡಿದ್ದಾರೆ. ಎಲ್ಲಾ ಆಗುಹೋಗುಗಳ ಮೂಖ ಪ್ರೇಕ್ಷಕರಾಗಿದ್ದಾರೆ. ಅಕ್ರಮ ಹಣ ವರ್ಗಾವಣೆ ಆರೋಪದಡಿ ದೆಹಲಿಯ ತಿಹಾರ್ ಜೈಲಿನಲ್ಲಿದ್ದಾರೆ. ಇನ್ನು ಡಿಕೆಶಿ ಜೈಲಲ್ಲಿರುವುದು ಆಡಳಿತ ನಡೆಸುತ್ತಿರುವ ಬಿಜೆಪಿಗೆ ದೊಡ್ಡ ಧನಾತ್ಮಕ ವಿಚಾರವಾಗಿದೆ. ಹಾಗೂ ಅವರ ಗೈರು ಆಡಳಿತ ಪಕ್ಷಕ್ಕೆ ಒಂದಿಷ್ಟು ರಿಲೀಫ್ ಕೊಟ್ಟಿದೆ.
ಒಂದೊಂದು ಅಧಿವೇಶನದಲ್ಲೂ ಡಿಕೆ ಶಿವಕುಮಾರ್ ಮುಖ್ಯ ವ್ಯಕ್ತಿಯಾಗಿ ಗುರುತಿಸಿಕೊಂಡವರು. ಅಧಿವೇಶನ ನಡೆಯುವ ಸಂದರ್ಭದಲ್ಲಿ ಡಿಕೆಶಿಯವರ ಗತ್ತು ಬೇರೆಯೇ ಆಗಿತ್ತು. ಯಾವುದೇ ವ್ಯಕ್ತಿಯನ್ನು ಸದಸ್ಯರಿಗೆ ಬಗ್ಗದ ಎಂಟೆದೆಯ ಬಂಟ ಡಿಕೆಶಿ ಅವರು ಸದನದಲ್ಲಿ ಒಂದಲ್ಲ ಒಂದು ವಿಚಾರದಲ್ಲಿ ತಮ್ಮ ಖದರ್ ತೋರಿಸುತ್ತಿದ್ದರು.
ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದ ಬಿ ಎಸ್ ಯಡಿಯೂರಪ್ಪ ವಿಶ್ವಾಸ ಮತ ಯಾಚಿಸದೆ ಭಾಷಣ ಮಾಡಿ ಸೋಲುಪ್ಪಿಕೊಂಡಿದ್ದರು. ಆಗಲೂ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದು ಡಿಕೆಶಿ. ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಸರ್ಕಾರದ ವಿರುದ್ಧ ಕೆಲವು ಶಾಸಕರು ಬಂಡಾಯದ ಬಾವುಟ ಬೀಸಿದಾಗ ಎಲ್ಲೆಲ್ಲೋ ಅಡಗಿದ್ದ ಶಾಸಕರನ್ನು ಹುಡುಕಿ ತಂದು ವ್ಹಿಪ್ ಪತ್ರವನ್ನು ಅವರ ಜೇಬಿನಲ್ಲಿ ತುರುಕಿದವರು ಡಿಕೆಶಿ, ಮತ್ತೆ 17 ಶಾಸಕರು ಮುಂಬೈಯ ಹೊಟೇಲ್ ವೊಂದರಲ್ಲಿ ತಂಗಿದ್ದಾಗ ಪೊಲೀಸ್ ಹದ್ದುಬಸ್ತನ್ನೂ ಮೀರಿ ಅವರ ಭೇಟಿಗೆ ತೆರಳಿದ್ದವರು ಡಿಕೆಶಿ.
ಆದರೆ, ಇದೀಗ ಡಿಕೆಶಿ ಜೈಲಲ್ಲಿರುವುದರಿಂದ ಸದನ ಬಿಕೋ ಎನ್ನುತ್ತಿದೆ.