ಬೆಂಗಳೂರು, ಅ.11(Daijiworld News/SS): ರಾಜ್ಯದಲ್ಲಿ ಹಿಂದೆಂದೂ ಕಾಣದ ನೆರೆ ಎದುರಾದರೂ ಸಮರ್ಪಕವಾದ ಪರಿಹಾರ ನೀಡದೆ ಅನ್ಯಾಯ ಮಾಡಲಾಗಿದೆ ಎಂದು ಕಾಂಗ್ರೆಸ್ ನಾಯಕ ಮಾಜಿ ಸಿಎಂ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಮುಖ್ಯಮಂತ್ರಿ ಸ್ಥಾನದಲ್ಲಿರುವ ಬಿಎಸ್ ಯಡಿಯೂರಪ್ಪ ಬಿಜೆಪಿ ನಾಯಕರೇ ಒಪ್ಪದ ಕೂಸು. ರಾಜ್ಯದಲ್ಲಿ ಹಿಂದೆಂದೂ ಕಾಣದ ಪ್ರವಾಹ ಪರಿಸ್ಥಿತಿ ಉಂಟಾಗಿದರೂ ಸಮಪರ್ಕವಾದ ಪರಿಹಾರ ನೀಡದೆ ಕೇಂದ್ರ ಸರ್ಕಾರವು ರಾಜ್ಯಕ್ಕೆ ಅನಾಯ ಎಸಗಿದ್ದು, 56 ಇಂಚು ಎದೆವುಳ್ಳ ಪ್ರಧಾನಿಗೆ ತಾಯಿ ಹೃದಯ ಇಲ್ಲವಲ್ಲ ಎಂಬುದೇ ನೋವಿನ ಸಂಗತಿ ಎಂದು ಲೇವಡಿ ಮಾಡಿದ್ದಾರೆ.
ರಾಜ್ಯದಲ್ಲಿ ಭೀಕರ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಹಿಂದೆಂದೂ ಕಾಣದ ನೆರೆ ಎದುರಾದರೂ ಸಮರ್ಪಕವಾದ ಪರಿಹಾರ ನೀಡದೆ ರಾಜ್ಯಕ್ಕೆ ಅನ್ಯಾಯ ಮಾಡಲಾಗಿದೆ. ಪ್ರಧಾನಿಗಳು ವಿದೇಶ ಪ್ರವಾಸ ಕೈಗೊಳ್ಳಲು ಅಭ್ಯಂತರ ಇಲ್ಲ. ಆದರೆ, ಯಾವುದಕ್ಕೆ ಆದ್ಯತೆ ನೀಡಬೇಕು ಎಂಬುದು ಗೊತ್ತಿರಬೇಕು. ವಿದೇಶಕ್ಕೆ ಹೋಗದಿದ್ದರೆ ಪ್ರಳಯವಾಗುವುದಿಲ್ಲ. ಅದನ್ನು ಮುಂದೂಡಬಹುದು. ಪ್ರವಾಹದಿಂದ ಲಕ್ಷಾಂತರ ಕುಟುಂಬಗಳ ಬದುಕು ಬೀದಿಗೆ ಬಿದ್ದಿದೆ. ಈ ಬಗ್ಗೆ ಗಮನ ಹರಿಸಬೇಕಿತ್ತಲ್ಲವೇ...? ಎಂದು ಪ್ರಶ್ನಿಸಿದರು.
ರಾಜ್ಯಕ್ಕೆ ಬಂದು ಪ್ರವಾಹ ಪರಿಸ್ಥಿತಿ ಕುರಿತು ಪ್ರಧಾನಿ ನರೇಂದ್ರ ಮೋದಿ ಸಮೀಕ್ಷೆ ನಡೆಸಬೇಕು. ಪ್ರಧಾನಿಯವರು 56 ಇಂಚು ಎದೆ ಇದೆ ಎಂದು ಹೇಳಿಕೊಳ್ಳುತ್ತಾರೆ. ಪೈಲ್ವಾನ್, ಬಾಡಿಬಿಲ್ಡರ್ಗಳಿಗೂ ಎದೆ ಇರುತ್ತದೆ. ಆದರೆ, ಆ ಎದೆಯಲ್ಲಿ ತಾಯಿ ಹೃದಯ ಇಲ್ಲವಲ್ಲ ಎಂಬುದೇ ಬೇಸರ ಎಂದು ಹೇಳಿದರು.