ಬೆಂಗಳೂರು, ಅ.11(Daijiworld News/SS): ಎರಡನೇ ದಿನವೂ ಮಾಜಿ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರ ಸದಾಶಿವನಗರದ ಮನೆಯಲ್ಲಿ ಐಟಿ ಅಧಿಕಾರಿಗಳು ಶೋಧ, ಪರಿಶೀಲನೆ ಮುಂದುವರೆಸಿದ್ದಾರೆ. ಹತ್ತಕ್ಕೂ ಹೆಚ್ಚು ಅಧಿಕಾರಿಗಳ ತಂಡ ಪರಮೇಶ್ವರ್ ನಿವಾಸದಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.
ತೆರಿಗೆ ವಂಚನೆ, ಸಿದ್ದಾರ್ಥ ವೈದ್ಯ ಕಾಲೇಜಿನಲ್ಲಿ ನಿಯಮಬಾಹಿರ ಸೀಟು ಹಂಚಿಕೆ ಅಥವಾ ಮಾರಾಟ ಆರೋಪ ಸಂಬಂಧ ದಾಳಿ ನಡೆದಿದ್ದು, ಆಸ್ತಿ, ವಹಿವಾಟು ಸೇರಿದಂತೆ ಇನ್ನಿತರ ವಿಚಾರಗಳ ಕುರಿತು ಪರಮೇಶ್ವರ್ ಅವರಿಂದ ಹೇಳಿಕೆ ದಾಖಲಿಸಿಕೊಳ್ಳುತ್ತಿದ್ದಾರೆಂದು ತಿಳಿದು ಬಂದಿದೆ.ಅ.10ರ ರಾತ್ರಿ 11ರವರೆಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಶೋಧ ನಡೆಸಿದ್ದರು ಎನ್ನಲಾಗಿದೆ.
ಮಾಜಿ ಡಿಸಿಎಂ ಡಾ. ಜಿ ಪರಮೇಶ್ವರ್ ಅವರ ನಿವಾಸ ಹಾಗೂ ಶಿಕ್ಷಣ ಸಂಸ್ಥೆಗಳ ಮೇಲೆ ಗುರುವಾರವೇ ಐಟಿ ಇಲಾಖೆ ದಾಳಿ ನಡೆಸಿದ್ದು, ತಪಾಸಣೆಯ ವೇಳೆ ಹಣ ಪತ್ತೆಯಾಗಿವೆ ಎಂದು ತಿಳಿದುಬಂದಿದೆ. ದಾಳಿ ವೇಳೆ ಒಟ್ಟು 4 ಕೋಟಿ 50 ಲಕ್ಷ ರೂಪಾಯಿ ಪತ್ತೆಯಾಗಿದ್ದು, ಜಿ ಪರಮೇಶ್ವರ್ ನಿವಾಸದಲ್ಲಿ 70 ಲಕ್ಷ, ನೆಲಮಂಗಲದಲ್ಲಿರುವ ಪುರಸಭೆ ಸದಸ್ಯ ಶಿವಕುಮಾರ್ ಮನೆಯಲ್ಲಿ 1.80 ಕೋಟಿ ನಗದನ್ನು ಐಟಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿದೆ.