ಚೆನ್ನೈ, ಅ.11(Daijiworld News/SS): ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಮತ್ತು ಪ್ರಧಾನಿ ಭೇಟಿ ನೀಡಲಿರುವ ತಮಿಳುನಾಡಿನಲ್ಲಿ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.
2 ದಿನಗಳ ಪ್ರವಾಸ ನಿಮಿತ್ತ ಶುಕ್ರವಾರ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಕ್ಸಿ ಜಿನ್ ಪಿಂಗ್ ಅವರ ಪ್ರವಾಸದ ನಿಮಿತ್ತ ತಮಿಳುನಾಡಿನ ಚೆನ್ನೈನಿಂದ ಮಹಾಬಲಿಪುರಂ ಮಾರ್ಗ ಮಧ್ಯೆ 34 ಪ್ರದೇಶಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಇಲ್ಲಿ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.
ಮೋದಿ ಮತ್ತು ಕ್ಸಿ ಜಿನ್ ಪಿಂಗ್ ಸಾಗುವ ಮಾರ್ಗಗಳಲ್ಲಿ ಸುಮಾರು 500ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಸುಮಾರು 10 ಸಾವಿರ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ವಿಶೇಷ ಭದ್ರತಾ ಪಡೆಗಳು, ಎಸ್ ಪಿಜಿ ಯೋಧರು ಭದ್ರತೆಗೆ ನಿಯೋಜನೆಗೊಂಡಿದ್ದಾರೆ. ಅಲ್ಲದೆ ಪ್ರಧಾನಿ ಮೋದಿ ಮತ್ತು ಕ್ಸಿ ಜಿನ್ ಪಿಂಗ್ ರನ್ನು ಕರಾವಳಿ ಭದ್ರತಾ ಪಡೆಗಳು ಕೂಡ ಹಿಂಬಾಲಿಸಲಿದ್ದು, ಸಮುದ್ರ ಮಾರ್ಗಗಳ ಮೇಲೆ ಸತತ ಕಣ್ಣಿಡಲಿವೆ. ಇದಕ್ಕಾಗಿ ತೀರ ಪ್ರದೇಶದಿಂದ 24 ನಾಟಿಕಲ್ ಮೈಲು ದೂರದಲ್ಲಿ ವಿಶೇಷ ನೌಕೆಗಳನ್ನು ಸರ್ವಸನ್ನದ್ಧ ಸ್ಥಿತಿಯಲ್ಲಿರಿಸಲಾಗಿದೆ.
ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಮಧ್ಯಾಹ್ನ 1.30ಕ್ಕೆ ಚೆನ್ನೈ ವಿಮಾನ ನಿಲ್ದಾಣದಲ್ಲಿ ಇಳಿದ ಬಳಿಕ ಅಲ್ಲಿಂದ ಮಹಾಬಲಿಪುರಂ ತಲುಪುವವರೆಗೂ ಬೈಕ್'ಗಳಲ್ಲಿ ತಮಿಳುನಾಡಿನ ವಿಶೇಷ ಪೊಲೀಸರು ಅವರನ್ನು ಹಿಂಬಾಲಿಸಲಿದ್ದಾರೆ.