ಚೆನ್ನೈ ಅ 11 (Daijiworld News/MSP): ವಿಲಕ್ಷಣ ಜಾತಿಯ ಹೆಬ್ಬಾವು ಹಾಗೂ ಹಲ್ಲಿಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ಇಬ್ಬರನ್ನು ಕಸ್ಟಮ್ಸ್ ಅಧಿಕಾರಿಗಳು ಚೆನ್ನೈ ಏರ್ಪೋರ್ಟ್ನಲ್ಲಿ ಬಂಧಿಸಿದ್ದಾರೆ. ಖದೀಮರು ವಿವಿಧ ಜಾತಿಯ ಹೆಬ್ಬಾವು ಹಾಗೂ ಹಲ್ಲಿಗಳನ್ನ ಕಳ್ಳಸಾಗಾಟ ಮಾಡುತ್ತಿದ್ದರು.
ಖದೀಮರಿಂದ , 1 ಗ್ರೀನ್ ಟ್ರೀ ಹೆಬ್ಬಾವು, 1 ಸ್ಕ್ರಬ್ ಹೆಬ್ಬಾವು, 2 ಬ್ಲಾಕ್ ಟ್ರೀ ಮಾನಿಟರ್ ಹಲ್ಲಿ, 5 ಎಮರಲ್ಡ್ ಟ್ರೀ ಮಾನಿಟರ್ ಹಲ್ಲಿ, 2 ಬ್ಲೂ ಸ್ಪಾಟೆಡ್ ಮಾನಿಟರ್ ಹಲ್ಲಿ, 1 ರೈಸಿಂಗರ್ ಟ್ರೀ ಮಾನಿಟರ್ ಹಾಗೂ 4 ಸೈಲ್ಫಿನ್ ಹಲ್ಲಿಯನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ತನಿಖೆ ಮುಂದುವರೆಸಿದ್ದಾರೆ.
ಆರೋಪಿಗಳನ್ನು ಮೊಹಮ್ಮದ್ ಪರ್ವಾಜ್ (36) ಮತ್ತು ಮೊಹಮ್ಮದ್ ಅಕ್ಬರ್ (28) ಎಂದು ಗುರುತಿಸಲಾಗಿದೆ. ಮಲೇಷ್ಯಾದ ಕೌಲಾಲಂಪುರದಿಂದ ಅಪರೂಪದ ಕಾಡು ಪ್ರಾಣಿಗಳು ಕಳ್ಳ ಸಾಗಣೆ ಮಾಡುವ ಸಾಧ್ಯತೆಯ ಮಾಹಿತಿಯ ಆಧಾರದ ಮೇಲೆ ಕಸ್ಟಮ್ಸ್ ಏರ್ ಇಂಟಲ್ಜೆನ್ಸ್ ಘಟಕದ (ಎಐಯು) ಅಧಿಕಾರಿಗಳು ಕೂಲಂಕುಷವಾಗಿ ತಪಾಷಣೆ ಮಾಡುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ.
ಕಸ್ಟಮ್ಸ್ ಅಧಿಕಾರಿಗಳು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, "ಮಲೇಷ್ಯಾದ ಕೌಲಾಲಂಪುರ್ ವಿಮಾನ ನಿಲ್ದಾಣದ ಬಳಿ ಇರುವ ವ್ಯಕ್ತಿಯೋರ್ವ ಈ ಚೀಲಗಳನ್ನು ನಮಗೆ ನೀಡಿ ಚೆನ್ನೈ ಏರ್ ಪೋರ್ಟ್ ನ ನಿಮ್ಮನ್ನು ಗುರುತಿಸುವ ವ್ಯಕ್ತಿಗೆ ನೀಡಿ ಎಂದು ನಿರ್ದೇಶಿಸಿದ್ದ" ಎಂದು ತಿಳಿಸಿದ್ದಾರೆ.
ವಶಪಡಿಸಿಕೊಂಡ ವಿಲಕ್ಷಣ ಜಾತಿಯ ಸರೀಸೃಪಗಳನ್ನು ಮಲೇಷ್ಯಾದ ಕೌಲಾಲಂಪುರಕ್ಕೆ ಹಿಂತಿರುಗಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದು, ಹೆಚ್ಚಿನ ತನಿಖೆಯನ್ನು ಮುಂದುವರಿಸಿದ್ದಾರೆ.