ಬೆಂಗಳೂರು, ಅ.12(Daijiworld News/SS): ರೈತರ ಮತ್ತು ಜನಸಾಮಾನ್ಯರ ರಕ್ಷಣೆಗೆ ಸರ್ಕಾರ ಬದ್ದವಾಗಿದೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.
ರಾಜ್ಯದಲ್ಲಿ ಉಂಟಾದ ಅತಿವೃಷ್ಠಿಗೆ ಹೆಚ್ಚಿನ ಪರಿಹಾರ ನೀಡಲಾಗುವುದು. ರೈತರು ಹಾಗೂ ಜನರ ಹಿತ ಕಾಪಾಡಲು ಸರ್ಕಾರ ಮುಂದಾಗಿದ್ದು, ವಾಸ ಮಾಡಲು ಆಗದೆ ಇರುವ ಎ ಮತ್ತು ಬಿ ವರ್ಗದ 42,893 ಮನೆಗಳಿಗೆ ತಲಾ 5 ಲಕ್ಷ ರೂಪಾಯಿಯಂತೆ ಪರಿಹಾರ ನೀಡಲಾಗುವುದು. ಸಿ ವರ್ಗದ 77,513 ಮನೆಗಳಿಗೆ 25 ಸಾವಿರ ರೂ. ಬದಲು 50 ಸಾವಿರ ರೂ. ಪರಿಹಾರ ನೀಡುವುದಾಗಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಅಪಾರ ಪ್ರಮಾಣದ ಮಳೆಯಿಂದಾಗಿ ರಸ್ತೆ ಹಾನಿಯಾಗಿದ್ದು, ದುರಸ್ತಿಗೆ 8 ಸಾವಿರ ಕೋಟಿ ರೂ. ಅಗತ್ಯವಿದೆ ಎಂದು ಅಂದಾಜಿಸಲಾಗಿದೆ. ಈಗಾಗಲೇ 500 ಕೋಟಿ ರೂ ಹಣವನ್ನು ತುರ್ತು ಕಾಮಗಾರಿಗಾಗಿ ಬಿಡುಗಡೆ ಮಾಡಲಾಗಿದೆ. ಬೆಳೆಹಾನಿಗೆ ಪ್ರತಿ ಹಕ್ಟೇರಿಗೆ 6800 ರೂ. ಜೊತೆಗೆ 10 ಸಾವಿರ ರೂ. ಸೇರಿ 16800 ರೂ. ನೀಡಲಾಗುವುದು. ನೀರಾವರಿ ಪ್ರದೇಶಕ್ಕೆ 13500ರೂ ಜೊತಗೆ ಹೆಚ್ಚುವರಿ 10 ಸಾವಿರ ರೂ ಹಾಗೂ ಶಾಶ್ವತ ನೀರಾವರಿಯ ಯೋಜನೆಗೆ ಪ್ರತಿ ಹೆಕ್ಟೇರ್'ಗೆ 18 ಸಾವಿರ ರೂ ಜೊತೆಗೆ ಹೆಚ್ಚುವರಿಯಾಗಿ 10 ಸಾವಿರ ರೂ ನೀಡಲಾಗುವುದು ಎಂದು ಭರವಸೆ ನೀಡಿದರು.
ರೇಷ್ಮೆ ಬೆಳೆ ಹಾಗೂ ಅಡಿಕೆ ಬೆಳೆ ಹಾನಿಗೂ ಪರಿಹಾರವನ್ನು ನೀಡಲು ಸರ್ಕಾರ ಮುಂದಾಗಿದೆ ಎಂದು ಮುಖ್ಯಮಂತ್ರಿ ಅವರು ವಿವರಣೆ ನೀಡಿದರು. ಇದುವರೆಗೂ ನೆರೆ ಸಂತ್ರಸ್ಥರಿಗೆ 2950 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. ಮುಂದಿನ ಹಣಕಾಸು ವರ್ಷದಲ್ಲಿ ಹೆಚ್ಚಿನ ಅನುಕೂಲ ಕಲ್ಪಿಸಲಾಗುವುದು ಎಂದರು. ಮಳೆಯಿಂದಾಗಿ ಅಂಗಡಿ ಮುಗ್ಗಟ್ಟುಗಳ ಹಾನಿಗೆ ತಲಾ 25 ಸಾವಿರ ರೂ ಹಾಗೂ ನೇಕಾರರ ಕೈ ಮಗ್ಗಗಳ ಹಾನಿಗೂ 25 ಸಾವಿರ ರೂ ಪರಿಹಾರ ನೀಡುವುದಾಗಿ ತಿಳಿಸಿದರು.
ರಾಜ್ಯದಲ್ಲಿ ಇರುವ ಆರ್ಥಿಕ ಇತಿಮಿತಿಗಳ ಒಳಗೆ ಮಳೆ ಬಂದು ಮೂರು ದಿನಗಳಲ್ಲಿಯೇ 2,33,633 ಜನರಿಗೆ ತಲಾ 10 ಸಾವಿರ ರೂ ನಂತೆ ಹಣವನ್ನು ಬಿಡುಗಡೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.