ಬೆಂಗಳೂರು, ಅ.12(Daijiworld News/SS): ಪರಿಹಾರ ಕಾರ್ಯಾಚರಣೆಗೆ ನೋಡಲ್ ಅಧಿಕಾರಿಯನ್ನು ನಿಯುಕ್ತಿಗೊಳಿಸಬೇಕು ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ರಾಜ್ಯದಿಂದ ಎಷ್ಟೇ ನೆರವಿಗೆ ಪ್ರಸ್ತಾವನೆ ಸಲ್ಲಿಕೆಯಾಗಿದ್ದರೂ ಎನ್ಡಿಆರ್ಎಫ್ ಮಾರ್ಗಸೂಚಿ ಅನುಸಾರವೇ ಕೇಂದ್ರ ಸರಕಾರ ಪರಿಹಾರ ನೀಡುತ್ತದೆ. ಅದು ಸಾಕಾಗುವುದಿಲ್ಲ. ಹಾಗಾಗಿ ರಾಜ್ಯದಿಂದಲೇ ಸಂಪನ್ಮೂಲ ಹೊಂದಿಸಬೇಕು. ಪರಿಹಾರ ಕಾರ್ಯಾಚರಣೆಗೆ ನೋಡಲ್ ಅಧಿಕಾರಿಯನ್ನೂ ನಿಯುಕ್ತಿಗೊಳಿಸಬೇಕು ಎಂದು ತಿಳಿಸಿದರು.
ರಾಜ್ಯದಲ್ಲಿ ಆರ್ಥಿಕ ಸಂಕಷ್ಟವಿಲ್ಲ. ಸರಕಾರ ಮನಸ್ಸು ಮಾಡಿದರೆ ಪ್ರವಾಹ ಪರಿಹಾರಕ್ಕೆ 15 ಸಾವಿರ ಕೋಟಿ ರೂ. ಹೊಂದಿಸಬಹುದು. ಈ ಉದ್ದೇಶಕ್ಕೆ ಹಿರಿಯ ಹಾಗೂ ಪರಿಣಿತ ಅಧಿಕಾರಿಗಳ ತಂಡ ರಚಿಸಬೇಕು. ಪ್ರವಾಹ ಪರಿಹಾರದ ವಿಷಯದಲ್ಲಿ ರಾಜಕೀಯವನ್ನೂ ಎಳೆದು ತರುವುದಿಲ್ಲ ಎಂದು ಹೇಳಿದರು.
ಈಗಿನ ಸರಕಾರಕ್ಕೆ ಸಾಲ ಮನ್ನಾ ಒತ್ತಡವಿಲ್ಲ. ಹಾಗಾಗಿ ಹಣ ಹೊಂದಿಸಬಹುದು. ಕೆಲ ಕಾರ್ಯಕ್ರಮ ಮುಂದೂಡಿ ನೆರೆ ಪರಿಹಾರಕ್ಕೆ ಬಳಸಿಕೊಳ್ಳಬಹುದು. ಇದಕ್ಕೆ ವಿರೋಧಿಸುವುದಿಲ್ಲ .ಈ ಹಿಂದೆ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರಕಾರವಿದ್ದಾಗ ಪ್ರಕೃತಿ ವಿಕೋಪವಾದಾಗಲೂ ಹೆಚ್ಚು ಪರಿಹಾರ ನೀಡಲಾಗಿದೆ. ಆಗ ಯಡಿಯೂರಪ್ಪ ಅವರೇ ಹಣಕಾಸು ಖಾತೆ ನೋಡಿಕೊಳ್ಳುತ್ತಿದ್ದರು ಎಂದು ತಿಳಿಸಿದರು.