ಬೆಂಗಳೂರು, ಅ.12(Daijiworld News/SS): ರಾಜ್ಯದಲ್ಲಿ ಅಪಾರ ಪ್ರಮಾಣದ ಮಳೆಯಿಂದಾಗಿ ತೊಂದರೆಯಾಗಿದೆ. ಆದರೆ ನೆರೆ ಪರಿಹಾರ ವಿಚಾರವಾಗಿ ರಾಜ್ಯದ ಕೆಲವು ಸಚಿವರು ಉಡಾಫೆ ಹೇಳಿಕೆ ನೀಡಿದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಎನ್ಡಿಆರ್ಎಫ್ ಮಾರ್ಗಸೂಚಿಗಿಂತಲೂ ಹೆಚ್ಚಿನ ಪರಿಹಾರವನ್ನು ಪ್ರವಾಹ ಸಂತ್ರಸ್ತ ರೈತರಿಗೆ ನೀಡಬೇಕು. ಜತೆಗೆ ನೆರೆ ಹಾವಳಿ ಬಗ್ಗೆ ವಿಸ್ತೃತ ಚರ್ಚಿಸಲು ಹಾಲಿ ಅಧಿವೇಶನವನ್ನು ಇನ್ನು ಮೂರು ದಿನ ವಿಸ್ತರಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯ ಸರಕಾರಕ್ಕೆ ದಾರಿದ್ರ್ಯ ಬಂದಿಲ್ಲ. ಕೆಲವು ಸಚಿವರು ಉಡಾಫೆ ಹೇಳಿಕೆ ನೀಡಿದ್ದಾರೆ. ಬಿಜೆಪಿಯಲ್ಲಿ 25 ಸಂಸದರಿದ್ದರೂ ಪ್ರಧಾನಿ ಬಳಿ ಹೋಗಿ ಮಾತನಾಡುವ ಧೈರ್ಯ ತೋರಿಲ್ಲ. ಸರ್ವಪಕ್ಷ ನಿಯೋಗ ಕೊಂಡೊಯ್ಯಲು ಕೇಳಿದರೆ ಸ್ಪಂದಿಸಿಲ್ಲ. ತಂತಿ ಮೇಲೆ ನಡೆಯುತ್ತಿರುವುದಾಗಿ ಹೇಳುತ್ತಿರುವ ಸಿಎಂ ಕೆಲಸ ಮಾಡಿ ತೋರಿಸಲಿ. ಇಲ್ಲದಿದ್ದರೆ ಕುರ್ಚಿ ಬಿಡಲಿ ಎಂದು ದೂರಿದರು.
ನಾನು ಸಿಎಂ ಆಗಿದ್ದಾಗ ಆಲಿಕಲ್ಲು ಮಳೆಯಿಂದ ಬೆಳೆ ಹಾನಿಯಾದಾಗ ಹೆಕ್ಟೇರ್ಗೆ 25 ಸಾವಿರ ರೂ. ನೀಡಿದ್ದೆ. ಈಗ ಹೆಕ್ಟೇರ್ಗೆ 1 ಲಕ್ಷ ರೂ. ಪರಿಹಾರ ನೀಡಬೇಕು. ಖುಷ್ಕಿ ಭೂಮಿಗೆ ಸಂಬಂಧಿಸಿ ಹೆಕ್ಟೇರ್ಗೆ 50 ಸಾವಿರ ಪರಿಹಾರ ಕೊಡಬೇಕು. ಇಲ್ಲಿಯವರೆಗೆ ಸರಿಯಾಗಿ ಬೆಳೆ ಸಮೀಕ್ಷೆಯೂ ಆಗಿಲ್ಲ. ಹಳ್ಳಿಗಳಲ್ಲಿ ಸಣ್ಣ ಅಂಗಡಿ ಇಟ್ಟುಕೊಂಡಿದ್ದವರಿಗೂ ಪ್ರವಾಹದಿಂದ ತೊಂದರೆಯಾಗಿದ್ದು, ಅವರಿಗೂ ಪರಿಹಾರ ನೀಡಬೇಕು. ಕುಸಿದ ಶಾಲಾ ಕಟ್ಟಡಗಳಿಗೂ ದುರಸ್ತಿ ಮಾಡಬೇಕು ಎಂದು ಹೇಳಿದರು.