ನವದೆಹಲಿ,ಅ 12 (Daijiworld News/MSP): ಐದು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರವಿಲ್ಲದಿರುವ ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದು ಒಂದೊಂದಾಗಿಯೇ ಬಹಿರಂಗವಾಗುತ್ತಿದೆ. ಪಕ್ಷದೊಳಗೆ ನಾಯಕರ ಮುಸುಕಿನ ಗುದ್ದಾಟ ಒಂದೆಡೆಯಾದರೆ, ಪಕ್ಷದ ಆರ್ಥಿಕ ಸ್ಥಿತಿಯೂ ತೀರ ಕೆಳಮಟ್ಟಕ್ಕೆ ತಲುಪಿದೆ. ಹೀಗಾಗಿ ಕಾಂಗ್ರೆಸ್ ಪಕ್ಷ ಎಲ್ಲದಕ್ಕೂ ಕಡಿವಾಣ ಹಾಕಿದ್ದು ಪದಾಧಿಕಾರಿಗಳ ಖರ್ಚು ವೆಚ್ಚಕ್ಕೂ ತಡೆಯೊಡ್ಡಿದೆ.
ಈ ಬಗ್ಗೆ ಸುದ್ದಿಸಂಸ್ಥೆಯೊಂದು ವರದಿ ಮಾಡಿದ್ದು, ರಾಜ್ಯದ ಉಸ್ತುವಾರಿ, ಪದಾಧಿಕಾರಿಗಳು ಸೇರಿದಂತೆ ಇತರರ ಖರ್ಚನ್ನು ಕಾಂಗ್ರೆಸ್ ನ ಲೆಕ್ಕಪತ್ರ ವಿಭಾಗ ಕಡಿತ ಮಾಡಿದ್ದು, ಚಹಾ ಮತ್ತು ತಿಂಡಿಗಳ ವೆಚ್ಚದ ಮಿತಿಯನ್ನು ತಿಂಗಳಿಗೆ 3,000 ರೂ. ಮೀರದಂತೆ ಕಡಿವಾಣ ಹಾಕಿದೆ.
ಈ ಹಿಂದೆ ಎಐಸಿಸಿ ಕ್ಯಾಂಟೀನ್ ನಿಂದಲೇ ಪದಾಧಿಕಾರಿಗಳು ಮತ್ತು ಇತರ ಮುಖಂಡರಿಗೆ ಚಹಾ ಮತ್ತು ತಿಂಡಿ,ತಿನಿಸುಗಳು ಸರಬರಾಜಾಗುತ್ತಿತ್ತು. ಇವೆಲ್ಲದರ ಬಿಲ್ ನ ಮೊತ್ತವನ್ನ ಕ್ಲೇಮ್ ಮಾಡಬಹುದಾಗಿದ್ದು, ಕಾಂಗ್ರೆಸ್ ನ ಅಕೌಂಟ್ಸ್ ವಿಭಾಗ ಮರುಪಾವತಿಸುತ್ತಿತ್ತು. ಆದರೆ ಇದಕ್ಕೆಲ್ಲಾ ಈಗ ಕಾಂಗ್ರೆಸ್ ಕಡಿವಾಣ ಹಾಕಿದೆ.
ಇದಲ್ಲದೆ, ಪಕ್ಷದ ಮುಖಂಡರಿಗೆ ಪಕ್ಷ ಸಂಘಟನೆ ಹಾಗೂ ಇತರ ಕಾರ್ಯಗಳ ಪ್ರಯುಕ್ತ ದೂರದೂರಿಗೆ ಪ್ರಯಾಣ ಮಾಡಬೇಕಾಗಿ ಬಂದಾಗ ರೈಲಿನ ಮೂಲಕ ಪ್ರಯಾಣ ಮಾಡುವಂತೆ ಸೂಚಿಸಲಾಗಿದೆ. ಅಲ್ಲದೆ ರಾತ್ರಿ ತಂಗಲು ಹೋಟೆಲ್ ಬುಕ್ಕಿಂಗ್ ಮಾಡಲು ಸಹ ಪಕ್ಷ ನಿರಾಕರಿಸಿದೆ. 2017 ರಲ್ಲಿ ಪಕ್ಷದ ಆಸ್ತಿ 854 ಕೋಟಿ ರೂ. ಆಗಿತ್ತು. 2018 ರಲ್ಲಿ 754 ಕೋಟಿಯಾಗಿತ್ತು. 2018-19ರಲ್ಲಿ ಪಕ್ಷದ ಒಟ್ಟು ಆಸ್ತಿ ಮೌಲ್ಯದಲ್ಲಿ ಶೇ.15ರಷ್ಟು ಇಳಿಕೆಯಾಗಿದೆಯಂತೆ.