ಬೆಂಗಳೂರು, ಅ 12 (Daijiworld News/MSP): "ಐಟಿ ಇಲಾಖೆಯ ಅಮಾನವೀಯ ಕಿರುಕುಳಕ್ಕೆ ಮತ್ತೊಂದು ಬಲಿಯಾಗಿದೆ" ಎಂದು ರಾಜ್ಯ ಕಾಂಗ್ರೆಸ್ ಟ್ವೀಟ್ ಮೂಲಕ ಗಂಭೀರ ಆರೋಪ ಮಾಡಿದೆ.
ಮಾಜಿ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಆಪ್ತ ಸಹಾಯಕ ರಮೇಶ್ ಆತ್ಮಹತ್ಯೆ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್, ರಾಜ್ಯದ ಜನ ಬಿಜೆಪಿ ಸರ್ಕಾರವನ್ನು, ಆದಾಯ ತೆರಿಗೆ ಇಲಾಖೆಯನ್ನು ಈ ಸಾವು ನ್ಯಾಯವೇ? ಎಂದೂ ಪ್ರಶ್ನಿಸಿದೆ. ರಮೇಶ್ ಅವರ ಆತ್ಮಕ್ಕೆ ಶಾಂತಿ ದೊರಕಲಿ, ಅವರ ಕುಟುಂಬದವರಿಗೆ ದುಃಖವನ್ನು ಭರಿಸುವ ಶಕ್ತಿ ದೊರೆಯಲಿ. ಅವರ ಕುಟುಂಬದವರ ದುಃಖದಲ್ಲಿ ನಾವೂ ಭಾಗಿಯಾಗಿದ್ದೇವೆ. ಓಂ ಶಾಂತಿ ಎಂದು ಟ್ವೀಟರ್ ನಲ್ಲಿ ಬರೆಯಲಾಗಿದೆ.
ಈ ನಡುವೆ ಐಟಿ ಇಲಾಖೆ ಪರಮೇಶ್ವರ್ ಪಿಎ ರಮೇಶ್ ಮನೆಯಲ್ಲಿ ಶೋಧ ನಡೆಸಿಲ್ಲ ಐಟಿ ಇಲಾಖೆ ಸ್ಪಷ್ಟಪಡಿಸಿದೆ. ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಐಟಿ ಇಲಾಖೆ, ಪರಮೇಶ್ವರ್ ಪಿಎ ರಮೇಶ್ ಕುಮಾರ್ ಅವರ ಮನೆ ಮೇಲೆ ದಾಳಿ ನಡೆದಿಲ್ಲ. ಆದರೆ ಪರಮೇಶ್ವರ್ ಅವರ ಮನೆ ಮೇಲೆ ದಾಳಿ ನಡೆಸಿದಾಗ ಜಿ.ಪರಮೇಶ್ವರ್ ಅವರು ಮನೆಯಲ್ಲಿಲ್ಲದ ಕಾರಣ ಕೊರಟಗೆರೆ ಕಾರ್ಯಕ್ರಮದಲ್ಲಿದ್ದ ಅವರನ್ನು ಬೆಂಗಾವನೊಂದಿಗೆ ಕರೆತಂದೆವು. ಈ ವೇಳೆ ರಮೇಶ್ ಅವರು ಪರಮೇಶ್ವರ್ ಅವರೊಂದಿಗೆ ಬಂದಿದ್ದರು. ಸರ್ಚ್ ಮುಗಿದ ಬಳಿಕ ಪಂಚನಾಮೆಗೆ ರಮೇಶ್ ಅವರ ಹೇಳಿಕೆ ಪಡೆದುಕೊಂಡಿದ್ದೇವೆ ಅಷ್ಟೇ ಎಂದು ಐಟಿ ಇಲಾಖೆ ತಿಳಿಸಿದೆ.