ಬೆಂಗಳೂರು, ಅ.12(Daijiworld News/SS): ಐಟಿ ಅಧಿಕಾರಿಗಳು ಸಂಪೂರ್ಣ ಪರಿಶೀಲನೆ ಮುಗಿಸಲಿ. ನಮ್ಮ ಬಳಿ ಇರುವ ಎಲ್ಲಾ ದಾಖಲಾತಿ ನೀಡುತ್ತೇವೆ. ಐಟಿ ದಾಳಿ ವಿಷಯಕ್ಕೆ ರಾಜಕೀಯ ಲೇಪ ಬಳಿಯುವುದಿಲ್ಲ. ಮೊದಲು ಅಧಿಕಾರಿಗಳಿಗೆ ಉತ್ತರ ನೀಡುತ್ತೇನೆ ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐಟಿ ಅಧಿಕಾರಿಗಳು ಎಲ್ಲೆಡೆ ಪರಿಶೀಲನೆ ನಡೆಸಿದ್ದು, ಮಂಗಳವಾರ ವಿಚಾರಣೆಗೆ ಕರೆದಿದ್ದಾರೆ. ಅಂದು ಅವರ ಎಲ್ಲಾ ಪ್ರಶ್ನೆಗಳಿಗೂ ಸಮಂಜಸ ಉತ್ತರ ಹಾಗೂ ದಾಖಲೆ ನೀಡುವುದಾಗಿ ಹೇಳಿದ್ದೇನೆ. ಕೆಲ ಮಾಧ್ಯಮದಲ್ಲಿ 3,500 ಕೋಟಿ ರು ಕಿಕ್ ಬ್ಯಾಕ್ ತೆಗೆದುಕೊಂಡಿದ್ದಾರೆ. ಹಾಗೂ 400 ಕೋಟಿ ರು. ನಗದು ಸಿಕ್ಕಿದೆ ಎಂದು ವರದಿ ಪ್ರಸಾರ ಮಾಡಿದ್ದಾರೆ. ಆದರೆ ಇದು ಸಂಪೂರ್ಣ ಆಧಾರ ರಹಿತವಾದದ್ದು, ಮಾಧ್ಯಮಗಳು ಸುದ್ದಿ ಪ್ರಸಾರ ಮಾಡುವ ಮೊದಲು ಸತ್ಯಾಸತ್ಯತೆಯನ್ನು ಅರಿತು ಮಾಡಲಿ ಎಂದು ಹೇಳಿದರು.
ಐಟಿ ಅಧಿಕಾರಿಗಳು ಮನೆ ಸೇರಿದಂತೆ ಕಾಲೇಜಿನಲ್ಲಿ ಪರಿಶೀಲನೆ ನಡೆಸಿದ್ದಾರೆ. ಅದಕ್ಕೆ ಸೂಕ್ತ ದಾಖಲಾತಿ ನೀಡಿದ್ದೇನೆ. ಬಳಿಕ ಕೆಲ ಪ್ರಶ್ನೆಗಳನ್ನು ಅಧಿಕಾರಿಗಳು ಕೇಳಿದ್ದಾರೆ. ಅಂತೆಯೇ ಸಮರ್ಪಕ ಉತ್ತರ ನೀಡಿದ್ದೇನೆ. ಕೆಲ ವಿದ್ಯಾರ್ಥಿಗಳ ದೂರಿನ ಆಧಾರದ ಮೇಲೆ ಪರಿಶೀಲನೆ ನಡೆಸಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ನಾನು ಸಂಪೂರ್ಣ ರಾಜಕೀಯದಲ್ಲಿ ತೊಡಗಿದ್ದರಿಂದ ಕಾಲೇಜು ಮಂಡಳಿಗೆ ಹೆಚ್ಚು ಗಮನ ನೀಡಿರಲಿಲ್ಲ ಎಂದು ಹೇಳಿದರು.