ಬೆಂಗಳೂರು, ಅ.12(Daijiworld News/SS): ವಿಧಾನಸೌಧ, ವಿಕಾಸ ಸೌಧ, ಎಂಎಸ್ ಬಿಲ್ಡಿಂಗ್, ಶಾಸಕಾಂಗ ಕಚೇರಿ, ರಾಜ್ಯ ಮಾನವ ಹಕ್ಕುಗಳ ಆಯೋಗ, ಮಾಹಿತಿ ಸೌಧ ಹಾಗೂ ಕರ್ನಾಟಕ ಮಾಹಿತಿ ಆಯೋಗ ಕಟ್ಟಡಗಳಲ್ಲಿ ಭದ್ರತೆ ವ್ಯವಸ್ಥೆಯನ್ನು ಹೆಚ್ಚಿಸುವ ಅಗತ್ಯವಿದೆ ಎಂದು ಈ ಹಿಂದೆ ನಗರ ಪೊಲೀಸ್ ಆಯುಕ್ತರು ಸರ್ಕಾರಕ್ಕೆ ತಿಳಿಸಿದ್ದರು. ಇದೀಗ ಸರ್ಕಾರಿ ಕಟ್ಟಡಗಳ ಭದ್ರತೆ ಹೆಚ್ಚಿಸಲು ಕೊನೆಗೂ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ.
ಪೊಲೀಸ್ ಆಯುಕ್ತರ ಮನವಿಯನ್ನು ಸ್ವೀಕರಿಸಿರುವ ಗೃಹ ಇಲಾಖೆ ಇದೀಗ ಉಪಕರಣಗಳ ಖರೀದಿಗೆ ಶೇ.50ರಷ್ಟು ಹಣವನ್ನು ಬಿಡುಗಡೆ ಮಾಡಿದೆ. 18 ಎಕ್ಸ್-ರೇ ಬ್ಯಾಗ್ ಸ್ಕ್ಯಾನರ್ಸ್, 21 ಡೋನ್ ಫ್ರೇಮ್ ಮೆಟಲ್ ಡಿಟೆಕ್ಟರ್, 44 ಹ್ಯಾಂಡ್ ಹೆಲ್ಡ್ ಮೆಟಲ್ ಡಿಟೆಕ್ಟರ್ ಸೇರಿದಂತೆ ಹಲವಾರು ಭದ್ರತಾ ಉಪಕರಣಗಳನ್ನು ವಿಧಾನಸೌಧಕ್ಕೆ ಅಳವಡಿಸುವ ಅವಶ್ಯಕತೆಯಿದ್ದು, ಇದಕ್ಕೆ ರೂ.4.52 ಕೋಟಿ ಅಗತ್ಯವಿದೆ ಎಂದು ತಿಳಿಸಿದ್ದರು.
ಗೃಹ ಇಲಾಖೆ ಹಣ ಬಿಡುಗಡೆ ಮಾಡಿರುವ ಹಿನ್ನಲೆಯಲ್ಲಿ ಶೀಘ್ರದಲ್ಲೇ ಪೊಲೀಸ್ ಇಲಾಖೆ ಉಪಕರಣಗಳ ಖರೀದಿಗೆ ಟೆಂಡರ್ ಕರೆಯಲಿದೆ. ಪ್ರಸ್ತುತ ಅಳವಡಿಸಲಾಗಿರುವ ಭದ್ರತಾ ಸಾಧನಗಳನ್ನು ಹಲವು ವರ್ಷಗಳ ಹಿಂದೆ ಅಳವಡಿಸಲಾಗಿದೆ. ಇದೀಗ ಭದ್ರತೆಯನ್ನು ಹೆಚ್ಚಿಸಬೇಕಿದ್ದು, ವ್ಯವಸ್ಥೆಯನ್ನು ನವೀಕರಿಸುವುದು ಅತ್ಯಗತ್ಯವಾಗಿದೆ. ಈ ಬಗ್ಗೆ ಸಾಕಷ್ಟು ಬಾರಿ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು.
ಇದೀಗ ಸರ್ಕಾರ ಹಣ ಬಿಡುಗಡೆ ಮಾಡಿದೆ. ಹಳೆಯ ಸಾಧನೆಗಳಿಗೆ ಹೋಲಿಕೆ ಮಾಡಿದರೆ. ಈ ಬಾರಿ ಅಳವಡಿಕೆ ಮಾಡುವ ಉಪಕರಣಗಳು ಅತ್ಯುತ್ತಮವಾಗಿರುತ್ತವೆ. ಪ್ರಸ್ತುತ ಅಳವಡಿಸುವ ಉಪಕರಣಗಳು ಭದ್ರತೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.