ನವದೆಹಲಿ, ಅ.12(Daijiworld News/SS): ಪ್ರಧಾನಿ ಮೋದಿ ಪರಿಚಯಿಸಿರುವ ವ್ಯವಸ್ಥೆಯಿಂದಾಗಿ, ಜನರು ಆರ್ಟಿಐ ಅರ್ಜಿ ಸಲ್ಲಿಸದೆಯೇ ಸರ್ಕಾರದ ಎಲ್ಲ ಯೋಜನೆಗಳ ಮಾಹಿತಿಯನ್ನೂ ಆನ್ಲೈನ್ ಮೂಲಕವೇ ತಿಳಿದುಕೊಳ್ಳಬಹುದಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ನವದೆಹಲಿಯಲ್ಲಿ ಕೇಂದ್ರ ಮಾಹಿತಿ ಆಯೋಗದ 14ನೇ ವಾರ್ಷಿಕ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಅವರು, ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಎಷ್ಟು ಸಾಧ್ಯವೋ ಅಷ್ಟು ಮಾಹಿತಿಗಳನ್ನು ಸಾರ್ವಜನಿಕರೊಂದಿಗೆ ಹಂಚಿಕೊಳ್ಳುವ ಮೂಲಕ ಮಾಹಿತಿ ಹಕ್ಕು ಕಾಯ್ದೆ(ಆರ್ಟಿಐ)ಯಡಿ ಅರ್ಜಿ ಸಲ್ಲಿಸಬೇಕಾದ ಅಗತ್ಯತೆಯನ್ನೇ ಕಡಿಮೆ ಮಾಡಿದೆ ಎಂದು ತಿಳಿಸಿದ್ದಾರೆ.
“ಆರ್ಟಿಐ ಅರ್ಜಿ ಸಲ್ಲಿಕೆಗೆ ಸಾಕಷ್ಟು ಅವಕಾಶಗಳಿದ್ದರೂ, ಅರ್ಜಿಗಳ ಸಂಖ್ಯೆ ಕಡಿಮೆಯಾಗಿದೆ ಎಂದರೆ, ಸರ್ಕಾರದ ಕೆಲಸವು ಜನರಿಗೆ ತೃಪ್ತಿ ತಂದಿದೆ ಎಂದರ್ಥ. ಹೆಚ್ಚಿನ ಸಂಖ್ಯೆಯ ಆರ್ಟಿಐ ಅರ್ಜಿಗಳು ಸರ್ಕಾರದ ಯಶಸ್ಸನ್ನು ಪ್ರತಿನಿಧಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.