ಅಹಮದಾಬಾದ್, ಅ 13 (Daijiworld News/MSP): ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಅ.13 ರ ಭಾನುವಾರ ಬೆಳಗ್ಗೆ ಗುಜರಾತ್ನ ಗಾಂಧಿನಗರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ತಾಯಿ ಹೀರಾ ಬೆನ್ ಅವರನ್ನು ಭೇಟಿ ಮಾಡಿದರು. ಸುಮಾರು ಅರ್ಧ ಗಂಟೆಗಳ ಕಾಲ ಪ್ರಧಾನಿ ತಾಯಿ ಹೀರಾ ಅವರೊಂದಿಗೆ ಕುಶಲೋಪಚರಿ ವಿಚಾರಿಸಿದರು. ಈ ಸಂದರ್ಭ ರಾಷ್ಟ್ರಪತಿ ಅವರ ಪತ್ನಿ ಸವಿತಾ ಕೋವಿಂದ್ ಸಹ ಜೊತೆಗಿದ್ದರು.
ರಾಷ್ಟ್ರಪತಿ ಅವರ ಗುಜರಾತ್ ಪ್ರವಾಸದ ಎರಡನೇ ದಿನವಾದ ಇಂದು ಗಾಂಧಿ ನಗರದ ಬಳಿ ಇರುವ ರೈಸಾನ್ ಗ್ರಾಮದಲ್ಲಿನ ಪ್ರಧಾನಿ ಅವರ ಮಾತೃಶ್ರೀ ಅವರ ನಿವಾಸಕ್ಕೆ ತೆರಳಿದರು. 90 ವರ್ಷದ ಮೀರಾ ಬಾಯಿ ಅವರೊಂದಿಗೆ ಅರ್ಧ ಗಂಟೆ ಕಳೆದರು. ಈ ಸಂದರ್ಭದಲ್ಲಿ ಮೋದಿ ಅವರ ಸಹೋದರ ಪಂಕಜ್ ಮೋದಿ ಸಹ ಇದ್ದರು.
ಬಳಿಕ ಕೋವಿಂದ ದಂಪತಿ ಕೋಬಾ ಪ್ರದೇಶದ ಸನಿಹ ಇರುವ ಮಹಾವೀರ್ ಜೈನ್ ಆರಾಧನಾ ಕೇಂದ್ರಕ್ಕೆ ತೆರಳಿ ಆಚಾರ್ಯ ಶ್ರೀ ಪದ್ಮಸಾಗರಸೂರ್ಜಿ ಅವರ ಆಶೀರ್ವಾದ ಪಡೆದರು.