ನವದೆಹಲಿ,ಅ 13 (Daijiworld News/MSP): ಕೇರಳದ ತ್ರಿಶ್ಯೂರಿನ ಕ್ರೈಸ್ತ ಸನ್ಯಾನಿಸಿಯಾಗಿದ್ದ ದಿವಂಗತ ಸಿಸ್ಟರ್ ಮಾರಿಯಮ್ ಥ್ರೆಸಿಯಾ ಅವರಿಗೆ ಕ್ಯಾಥೋಲಿಕ್ ಕ್ರಿಶ್ಚಿಯನ್ನರ ಪರಮೋಚ್ಚ ಧರ್ಮ ಗುರು ಪೋಪ್ ಫ್ರಾನ್ಸಿಸ್ ಸಂತ ಪದವಿ(ಸೇಂಟ್ಹುಡ್) ಘೋಷಿಸಿದ್ದಾರೆ.
ರೋಮ್ನ ಪವಿತ್ರ ನಗರಿ ವ್ಯಾಟಿಕನ್ ಸಿಟಿಯಲ್ಲಿ ಭಾನುವಾರ ನಡೆಯುವ ವಿಶೇಷ ಸಮಾರಂಭದಲ್ಲಿ ಕೇರಳ ತ್ರಿಶ್ಯೂರಿನ ಸಿಸ್ಟರ್ ಥ್ರೆಸಿಯಾ ಅವರನ್ನು ಪೋಪ್ ಸಂತ ಪದವಿಗೇರಿಸುವರು.
ಈ ಕಾರ್ಯಕ್ರಮದಲ್ಲಿ ಕೇಂದ್ರದಿಂದ ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವ ವಿ. ಮುರಳೀಧರನ್ ನೇತೃತ್ವದ ನಿಯೋಗ ಪಾಲ್ಗೊಳ್ಳಲಿದೆ. ಥ್ರೆಸಿಯಾ ಅವರಲ್ಲದೇ ಇಂಗ್ಲೆಂಡ್ನ ಕಾರ್ಡಿನಲ್ ಜಾನ್ ಹೆನ್ರಿ ನ್ಯೂಮನ್, ಸ್ವಿಟ್ಜರ್ಲೆಂಡ್ನ ಲೇವುಮನ್ ಮಾರ್ಗರೇಟ್ ಬೇಸ್, ಬ್ರೆಜಿಲ್ನ ಸಿಸ್ಟರ್ ಡ್ಯೂಸ್ ಲೋಪ್ಸ್ ಮತ್ತು ಇಟಲಿಯ ಸಿಸ್ಟರ್ ಗ್ಯೂಸೆಪ್ಪೀನಾ ವೆನ್ನಿನಿ ಅವರನ್ನೂ ಸಹ ಸಂತ ಪದವಿಗೇರಿಸಲಾಗುವುದು.
ಶತಶತಮಾನದ ಇತಿಹಾಸ ಹೊಂದಿರುವ ವ್ಯಾಟಿಕನ್ ಸಿಟಿಯಿಂದ ಸಂತ ಪದವಿ ಪಡೆದ ಕೇರಳದ ನಾಲ್ಕನೇ ವ್ಯಕ್ತಿಯಾಗಿದ್ದಾರೆ. ಥ್ರೆಸಿಯಾ ಕ್ರೈಸ್ತ ಸಮುದಾಯ ಮತ್ತು ಮನುಕುಲದ ಒಳಿತಿಗಾಗಿ ಅಮೂಲ್ಯ ಸೇವೆಗಳನ್ನು ನೀಡಿದ್ದರು. ಹಲವಾರು ಉನ್ನತ ಹುದ್ದೆಗಳನ್ನು ಗಳಿಸಿ ಅನೇಕ ಸಾಮಾಜಿಕ ಕೊಡುಗೆಗಳಿಗೆ ನೆರವಾಗಿದ್ದ ಇವರು ಜೂನ್ 8, 1926ರಲ್ಲಿ ತಮ್ಮ 50ನೇ ವಯಸ್ಸಿನಲ್ಲಿ ನಿಧನರಾದರು.
ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 29ರ ಮನ್ ಕಿ ಬಾತ್ ಬಾನುಲಿ ಕಾರ್ಯಕ್ರಮದಲ್ಲಿ ಸಿಸ್ಟರ್ ಮಾರಿಯಮ್ ಥ್ರೆಸಿಯಾ ಅವರಿಗೆ ಪೋಪ್ ಫ್ರಾನ್ಸಿಸ್ ಸಂತ ಪದವಿ ಘೋಷಿಸುವರು ಎಂದು ತಿಳಿಸಿ ಅವರ ಮನುಕುಲ ಸೇವೆಯ ಗುಣಗಾನ ಮಾಡಿದ್ದರು. 2000 ರಲ್ಲಿ ಮರಿಯಮ್ ಅವರಿಗೆ ಸಂತ ಪದವಿ ನೀಡಲು ಅಂಕಿತ ಹಾಕಿದ್ದರು.