ಹರಿಹರ, ಅ.14(Daijiworld News/SS): ರಾಜ್ಯದಲ್ಲಿರುವ ಜನಪರ ಯೋಜನೆಗಳನ್ನು ಕೈಬಿಟ್ಟಲ್ಲಿ ಬೀದಿಗಿಳಿದು ಹೋರಾಟ ಮಾಡಲಾಗುವುದು ಎಂದು ಮಾಜಿ ಸಿಎಂ ಹಾಗೂ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಬಿಜೆಪಿ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಕೆಲವೆಡೆ ಅನುದಾನ ನೀಡದೆ ಕೆಲವು ಇಂದಿರಾ ಕ್ಯಾಂಟೀನ್ ಮುಚ್ಚಲಾಗಿದೆ ಎಂಬ ಮಾಹಿತಿ ದೊರೆತಿದೆ. ಕ್ರಮೇಣ ಈ ಯೋಜನೆಯನ್ನು ಕೈಬಿಡುವ ಗುರಿ ಈಗಿನ ಸರಕಾರದ್ದಿರಬಹುದು. ಹಸಿವು ಮುಕ್ತ ರಾಜ್ಯ ಮಾಡುವ ಕಲ್ಪನೆಯೊಂದಿಗೆ ನಮ್ಮ ಸರಕಾರ ಅನ್ನಭಾಗ್ಯ, ಇಂದಿರಾ ಕ್ಯಾಂಟೀನ್, ಕ್ಷೀರಭಾಗ್ಯದಂತಹ ಯೋಜನೆಗಳನ್ನು ಜಾರಿ ಮಾಡಿದೆ. ಕೆಲವರಿಂದ ಇದನ್ನು ಸಹಿಸಲಾಗುತ್ತಿಲ್ಲ. ಹಾಗೇನಾದರು ಈ ಯೋಜನೆಗಳನ್ನು ಕೈಬಿಟ್ಟಲ್ಲಿಅಥವಾ ಅನುದಾನ ಜಾರಿ ಮಾಡದಿದ್ದರೆ ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದು ಹೇಳಿದರು.
ಕ್ಯಾಂಟೀನ್ಗಳಿಗೆ ಅನುದಾನ ಒದಗಿಸುವ ಭಾರವನ್ನು ಸ್ಥಳೀಯ ಸಂಸ್ಥೆಗಳಿಗೆ ವಹಿಸಬಾರದು. ರಾಜ್ಯ ಸರಕಾರ ಪೂರಕ ಅನುದಾನ ನೀಡಬೇಕು. ಯಾವುದೆ ಕಾರಣಕ್ಕೂ ಈ ಯೋಜನೆಗೆ ಹಣಕಾಸಿನ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಅತ್ಯಂತ ಕಡಿಮೆ ದರದಲ್ಲಿ ಆಹಾರ ಒದಗಿಸುವ ಇಂದಿರಾ ಕ್ಯಾಂಟೀನ್ ಯೋಜನೆಗೆ ಬೇಕಾಗಿರುವ ಅನುದಾನ ಕೇವಲ 300 ಕೋಟಿ ರೂ. ಮಾತ್ರ. ಇದು ರಾಜ್ಯ ಸರಕಾರಕ್ಕೆ ಹೊರೆಯಾಗುವುದಿಲ್ಲ. ಅನ್ನಭಾಗ್ಯದಿಂದ 4 ಕೋಟಿ ಜನರಿಗೆ ಅನುಕೂಲವಾಗಿದೆ ಎಂದು ತಿಳಿಸಿದರು.