ಶ್ರೀನಗರ, ಅ.14(Daijiworld News/SS): ಜಮ್ಮು ಕಾಶ್ಮೀರದಲ್ಲಿ ಆಗಸ್ಟ್ 5ರಂದು ಆರ್ಟಿಕಲ್ 370ನ್ನು ರದ್ದುಗೊಳಿಸುವ ಸಂದರ್ಭದಲ್ಲಿ ಭದ್ರತೆಯ ಕಾರಣಕ್ಕಾಗಿ ಎಲ್ಲಾ ಮೊಬೈಲ್ ಸೇವೆಗಳನ್ನು ಸ್ಥಗಿತ ಮಾಡಲಾಗಿತ್ತು. ಇದೀಗ ಕಣಿವೆ ರಾಜ್ಯದ ವಿಶೇಷಾಧಿಕಾರ ರದ್ದತಿಯ ಸಮಯದಲ್ಲಿ ಸ್ಥಗಿತಗೊಳಿಸಲಾಗಿದ್ದ ಮೊಬೈಲ್ ಸೇವೆಯನ್ನು ಮತ್ತೆ ಆರಂಭಿಸಲಾಗಿದೆ.
ಜಮ್ಮು ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ನಂತರ ಮೊಬೈಲ್ ಸೇವೆಗಳಿಗೆ ಭದ್ರತೆಯ ದೃಷ್ಟಿಯಿಂದ ನಿರ್ಭಂದ ಹೇರಲಾಗಿತ್ತು. ಇಂಟರ್ ನೆಟ್, ಮೊಬೈಲ್ ಸೇರಿದಂತೆ ಹಲವು ಸೇವೆಗಳನ್ನು ರದ್ದುಗೊಳಿಸಲಾಗಿತ್ತು. 69 ದಿನಗಳ ಬಳಿಕ ಇದೀಗ ಜಮ್ಮು- ಕಾಶ್ಮೀರದಲ್ಲಿ ಶೇ 99 ರಷ್ಟು ನಿರ್ಭಂದ ಸಡಿಲಿಸಲಾಗಿದೆ.
ಪೋಸ್ಟ್ ಪೈಡ್ ನೆಟ್'ವರ್ಕ್'ಗಳು ಜಮ್ಮು ಕಾಶ್ಮೀರದಲ್ಲಿ ಕಾರ್ಯ ನಿರ್ವಹಿಸಲಿದೆ. ಸುಮಾರು 40 ಲಕ್ಷ ಪೋಸ್ಟ್ ಪೈಯ್ಡ್ ಮೊಬೈಲ್'ಗಳು ರಿಂಗಣಿಸಲಿದೆ. ಆದರೆ ಸಮಾರು 20 ಲಕ್ಷ ಪ್ರಿಪೈಯ್ಡ್ ಮೊಬೈಲ್ ನೆಟ್ ವರ್ಕ್ ಗಳು ಇನ್ನಷ್ಟು ಕಾಯಬೇಕಾಗಿದೆ.
ಈ ನಡುವೆ ಸುಳ್ಳು ಸುದ್ದಿ ಮತ್ತು ದ್ವೇಷದ ಸಂದೇಶಗಳನ್ನು ಹರಡುವವರನ್ನು ಪತ್ತೆ ಹಚ್ಚಲಾಗುವುದು. ಶಾಂತಿ ಕದಡುವ ಯಾವುದೇ ಅವಕಾಶ ನೀಡಲಾಗುವುದಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.