ಹೊಸದಿಲ್ಲಿ, ಅ.14(Daijiworld News/SS): ಕಾಂಗ್ರೆಸ್ ನಾಯಕ, ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಜಾಮೀನು ವಿಚಾರಣೆ ಅರ್ಜಿ ನಾಳೆಗೆ ಮುಂದೂಡಿಕೆಯಾಗಿದೆ.
ಅಕ್ರಮ ಆಸ್ತಿ ಗಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿರುವ ಡಿಕೆ ಶಿವಕುಮಾರ್ ಜಾಮೀನು ವಿಚಾರಣೆಯನ್ನು ಕೈಗೆತ್ತಿಕೊಂಡ ದೆಹಲಿ ಹೈಕೋರ್ಟ್ ನಾಳೆ ಮಧ್ಯಾಹ್ನ 3.30ಕ್ಕೆ ವಿಚಾರಣೆಯನ್ನು ಮುಂದೂಡಿದೆ.
ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆಯಾಗುತ್ತಿದ್ದಂತೆ, ನಾಳೆ ಡಿಕೆಶಿ ಪರ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಲಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ, ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ದೆಹಲಿಯ ತಿಹಾರ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಸೆ. 4ರಿಂದಲೂ ಜಾರಿ ನಿರ್ದೇಶನಾಲಯದ ವಿಚಾರಣೆ ಎದುರಿಸುತ್ತಿರುವ ಡಿಕೆ ಶಿವಕುಮಾರ್ ಅವರನ್ನು ನ್ಯಾಯಾಂಗ ಕಸ್ಟಡಿಗೆ ಒಳಪಡಿಸಲಾಗಿದೆ. ಅವರಿಗೆ ಜಾಮೀನು ಸಿಗುವವರೆಗೂ ಡಿಕೆಶಿ ತಿಹಾರ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲೇ ಮುಂದುವರಿಯಬೇಕಿದೆ. ತಿಹಾರ್ ಜೈಲಿನಲ್ಲಿರುವ ಡಿಕೆ ಶಿವಕುಮಾರ್ ಎಷ್ಟೂ ಜಾಮೀನು ಕೋರಿ ಅರ್ಜಿ ಸಲ್ಲಿಸಿದರು ನ್ಯಾಯಲಯ ತಿರಸ್ಕರಿಸುತ್ತಲೇ ಬಂದಿದೆ.