ನವದೆಹಲಿ, ಅ.15(Daijiworld News/SS): ಕಾಶ್ಮೀರದಲ್ಲಿ ಭಯೋತ್ಪಾದನಾ ಸಂಘಟನೆಗಳಿಗೆ ಎನ್ಐಎ ನೀಡಿದಷ್ಟು ಹೊಡೆತವನ್ನು ಇನ್ಯಾವ ಸಂಸ್ಥೆಗಳು ನೀಡಿಲ್ಲ. ವಿಧ್ವಂಸಕ ಪ್ರಕರಣಗಳನ್ನು ಎನ್ಐಎ ಅತ್ಯಂತ ನಾಜೂಕಿನಿಂದ ನಿರ್ವಹಿಸಿದ್ದು, ಉಗ್ರರ ಗುಂಪುಗಳು ತತ್ತರಿಸಿವೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಹೇಳಿದರು.
ಅಪಾರ ಹಣ, ಮಾನವ ಸಂಪನ್ಮೂಲ ನಷ್ಟ ಮಾಡುವ ಯುದ್ಧಕ್ಕೆ ಈಗ ಯಾವುದೇ ದೇಶ ಮುಂದಾಗುತ್ತಿಲ್ಲ. ಇದರ ಬದಲಿಗೆ ಕಡಿಮೆ ಖರ್ಚಿನಲ್ಲಿ ಶತ್ರು ರಾಷ್ಟ್ರದಲ್ಲಿ ಆಶಾಂತಿ ಉಂಟು ಮಾಡುವ ಮೂಲಭೂತವಾದ ಅಥವಾ ಉಗ್ರವಾದದ ಮೊರೆ ಹೋಗುತ್ತಿವೆ ಎಂದು ಪಾಕಿಸ್ತಾನಕ್ಕೆ ಪರೋಕ್ಷವಾಗಿ ಅವರು ಚಾಟಿ ಬೀಸಿದರು.
ಭಯೋತ್ಪಾದನೆ ನಿಗ್ರಹಕ್ಕೆ ಅಜಿತ್ ಧೋವಲ್ ಮೂರು ಸೂತ್ರಗಳನ್ನು ಮುಂದಿಟ್ಟಿದ್ದಾರೆ. ಉಗ್ರರು ಯಾರೆಂಬುದನ್ನು ಪತ್ತೆ ಮಾಡುವುದು, ಅವರಿಗೆ ಯಾವ ದೇಶ ಬೆಂಬಲಿಸುತ್ತಿದೆ ಮತ್ತು ಅವರ ಆರ್ಥಿಕ ನೆರವಿನ ಮೂಲವನ್ನು ಗುರುತಿಸಿಕೊಂಡರೆ ಭಯೋತ್ಪಾದಕರ ಅಟ್ಟಹಾಸಕ್ಕೆ ಕಡಿವಾಣ ಹಾಕಬಹುದು ಎಂದು ಹೇಳಿದ್ದಾರೆ.
ಸರ್ಕಾರವೇ ಬೆಂಬಲಕ್ಕೆ ನಿಂತರೆ ಉಗ್ರವಾದವನ್ನು ಹೊಸಕಿಹಾಕುವುದು ಕಷ್ಟ. ಇಂಥ ದೊಡ್ಡ ಸವಾಲು ಪಾಕಿಸ್ತಾನಕ್ಕೆ ಎದುರಾಗಿದೆ. ಜಾಗತಿಕವಾಗಿ ಉಗ್ರರ ಹಣಕಾಸು ನೆರವಿಗೆ ಕಡಿವಾಣ ಹಾಕುವ ಹಣಕಾಸು ಕ್ರಿಯಾ ಕಾರ್ಯಪಡೆ (ಎಫ್ಎಟಿಎಫ್) ಕ್ರಮಗಳು ಪಾಕಿಸ್ತಾನವನ್ನು ತೀವ್ರ ಇಕ್ಕಟ್ಟಿಗೆ ಸಿಲುಕಿಸಿದೆ ಎಂದು ಹೇಳಿದರು.