ಹರ್ಯಾಣ, ಅ.15(Daijiworld News/SS): ಕಾಂಗ್ರೆಸ್ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಮತ್ತೆ ವಾಗ್ದಾಳಿ ನಡೆಸಿದ್ದು, ಕಾಂಗ್ರೆಸ್ ವೋಟ್ ಬ್ಯಾಂಕ್ ರಾಜಕೀಯ ನಡೆಸುತ್ತಿದೆ ಎಂದು ಹೇಳಿದರು.
ಅಕ್ಟೋಬರ್ 21ರಂದು ಹರ್ಯಾಣದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬಲ್ಲಾಬ್ ಗಢ್'ನಲ್ಲಿ ಚುನಾವಣಾ ಸಭೆಯಲ್ಲಿ ಮಾತನಾಡಿದರು. ಕಾಂಗ್ರೆಸ್ ಪಕ್ಷ ನಾಯಕತ್ವವನ್ನೇ ಕಳೆದುಕೊಂಡಿದೆ. ಹರ್ಯಾಣದಲ್ಲಿ ಬಿಜೆಪಿ ಮನೋಹರ್ ಲಾಲ್ ಖಟ್ಟರ್ ನಂತಹ ಬಲಿಷ್ಠ ನಾಯಕನನ್ನು ಹೊಂದಿದೆ. ರಾಜ್ಯದ ಅಭಿವೃದ್ಧಿಗೆ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿ ಎಂದು ವಿನಂತಿಸಿದ್ದಾರೆ.
ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿ ಹಾಗೂ ತ್ರಿವಳಿ ತಲಾಖ್ ರದ್ದುಪಡಿಸಿರುವ ಕೇಂದ್ರದ ನಿರ್ಧಾರವನ್ನು ಕಾಂಗ್ರೆಸ್ ವಿರೋಧಿಸುತ್ತಿದೆ. 370ನೇ ವಿಧಿಯನ್ನು ಕಾಂಗ್ರೆಸ್ ಪ್ರೀತಿಸುತ್ತಿದೆಯೇ ಎಂಬುದನ್ನು ವಿವರಿಸಬೇಕು. ಕಾಂಗ್ರೆಸ್ ಪಕ್ಷ 370ನೇ ವಿಧಿಯನ್ನು ಅಪ್ಪಿಕೊಂಡಿದ್ದರಿಂದಲೇ ನಮ್ಮ ಸೈನಿಕರು ಹುತಾತ್ಮರಾಗುವಂತಾಗಿದೆ. ಹರ್ಯಾಣದ ಧೈರ್ಯಶಾಲಿ ಯೋಧರು ಜಮ್ಮು-ಕಾಶ್ಮೀರದ ಅಮಾಯಕ ಜನರ ರಕ್ಷಣೆ ಮಾಡುತ್ತಿದ್ದಾರೆ. ಉಗ್ರರ ಗುಂಡಿನ ದಾಳಿಗೆ ಸಿಕ್ಕು ಹುತಾತ್ಮರಾದ ಯೋಧರ ಪಾರ್ಥೀವ ಶರೀರ ತ್ರಿವರ್ಣ ಧ್ವಜ ಸುತ್ತಿದ ಪೆಟ್ಟಿಗೆಯೊಂದಿಗೆ ತಾಯ್ನಾಡಿಗೆ ಬರುತ್ತದೆ. ನಿಮ್ಮ 370ನೇ ವಿಧಿಯ ಪ್ರೀತಿಯಿಂದಾಗಿ ಅದೆಷ್ಟು ಮಂದಿ ತಾಯಿಯಂದಿರು ತಮ್ಮ ಮಕ್ಕಳನ್ನು ಕಳೆದುಕೊಂಡಿದ್ದಾರೆ ಎಂಬುದನ್ನು ಕೇಳಿಕೊಳ್ಳಿ ಎಂದು ಹೇಳಿದರು.