ನವದೆಹಲಿ, ಅ 15 (Daijiworld News/MSP): ಖ್ಯಾತ ಅರ್ಥಶಾಸ್ತ್ರಜ್ಞ ಹಾಗೂ 2019ನೇ ಸಾಲಿನ ಅರ್ಥಶಾಸ್ತ್ರ ನೊಬೆಲ್ ಪ್ರಶಸ್ತಿ ಪುರಸ್ಕೃತ ಭಾರತೀಯ ಮೂಲದ ಅಭಿಜಿತ್ ಬ್ಯಾನರ್ಜಿ ಅವರು ತಿಹಾರ್ ಜೈಲಿನಲ್ಲಿದ್ದರು ಎಂದರೇ ನಂಬಲೇಬೇಕು.
ವರದಿಯ ಪ್ರಕಾರ, 1983 ರಲ್ಲಿ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಕ್ಯಾಂಪಸ್ನಲ್ಲಿ ನಡೆದಿದ್ದ ವಿದ್ಯಾರ್ಥಿ ಆಂದೋಲನದ ನಂತರ ಬಂಧಿಸಲ್ಪಟ್ಟ 400 ವಿದ್ಯಾರ್ಥಿಗಳಲ್ಲಿ ಬ್ಯಾನರ್ಜಿ ಕೂಡಾ ಒಬ್ಬರಾಗಿದ್ದರು. ಜೆಎನ್ಯು ವಿದ್ಯಾರ್ಥಿ ಸಂಘದ ನಾಯಕನನ್ನು ಕಾಲೇಜಿನಿಂದ ಹೊರಹಾಕಿದ್ದಕ್ಕಾಗಿ ವಿಶ್ವವಿದ್ಯಾಲಯದ ಉಪಕುಲಪತಿ ಅವರ ಮನೆಯ ಮುಂದೆ ವಿದ್ಯಾರ್ಥಿಗಳೆಲ್ಲರೂ ಪ್ರತಿಭಟನೆ ನಡೆಸಿದ್ದರು. ಇದರಲ್ಲಿ ಬ್ಯಾನರ್ಜಿ ಕೂಡಾ ಭಾಗವಹಿಸಿದ್ದರು. ವಿದ್ಯಾರ್ಥಿಯಾಗಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಬ್ಯಾನರ್ಜಿ ಅವರನ್ನು 10 ದಿನಗಳ ಕಾಲ ತಿಹಾರ್ ಜೈಲಿಗೆ ಕಳುಹಿಸಲಾಯಿತು.
ಅಂದು ಕೇಂದ್ರದಲ್ಲಿದ್ದ ಕಾಂಗ್ರೆಸ್ ಸರ್ಕಾರ ಮತ್ತು ಎಡಪಂಥಿಯ ಒಲವಿನ ಪ್ರಾಧ್ಯಾಪಕರಿಂದಾಗಿ ನಮ್ಮ ಮೇಲೆ ಪೊಲೀಸರು ಕ್ರಮವನ್ನು ಕೈಗೊಂಡಿದ್ದರು. ಈ ವೇಳೆ ಪೊಲೀಸರು ಬ್ಯಾನರ್ಜಿಯನ್ನು ಹೊಡೆದಿದ್ದರು. 10 ದಿನಗಳ ನಂತರ ವಿದ್ಯಾರ್ಥಿಗಳನ್ನು ಬಿಡುಗಡೆ ಮಾಡಲಾಯಿತು. ಆದರೆ ವಿದ್ಯಾರ್ಥಿಗಳ ವಿರುದ್ಧ ದಾಖಲಾದ ಪ್ರಕರಣಗಳು ಯಾವುದು ಸಾಬೀತಾಗಲಿಲ್ಲ ಎಂದು ವರದಿ ತಿಳಿಸಿದೆ.
೫೮ ವರ್ಷದ ಬ್ಯಾನರ್ಜಿ ಅವರು ಹುಟ್ಟಿದ್ದು ಪಶ್ಚಿಮಬಂಗಾಳದ ಧುಲೆಯಲ್ಲಿ. ಅವರ ತಾಯಿ ನಿರ್ಮಲಾ ಬ್ಯಾನರ್ಜಿ ಮತ್ತು ತಂದೆ ದೀಪಕ್ ಬ್ಯಾನರ್ಜಿ. ಇಬ್ಬರೂ ಅರ್ಥಶಾಸ್ತ್ರದ ಪ್ರೊಫೆಸರ್ ಗಳಾಗಿದ್ದರು.