ನವದೆಹಲಿ, ಅ.15(Daijiworld News/SS): ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಇ.ಡಿ.ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆಯ ವೇಳೆ ತಿಹಾರ್ ಜೈಲು ಅಧಿಕಾರಿಗಳ ವಿರುದ್ಧ ಆರೋಪ ಮಾಡಿದ್ದಾರೆ.
ಓರ್ವ ವಿಚಾರಣಾಧೀನ ಕೈದಿಯನ್ನು ಹೇಗೆ ನಡೆಸಿಕೊಳ್ಳಬೇಕು ಎಂಬುದು ನನಗೆ ಗೊತ್ತು. ಆದರೆ ನನ್ನನ್ನು ತಿಹಾರ್ ಪೋಲಿಸರು ಒಳ್ಳೆಯ ರೀತಿಯಲ್ಲಿ ನಡೆಸಿಕೊಳ್ಳುತ್ತಿಲ್ಲ. ಪೊಲೀಸರು ಜೈಲಿನಲ್ಲಿ ನನ್ನನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ. ಬ್ಯಾರಕ್ನಿಂದ ಹೊರಗೆ ಬಂದ ವೇಳೆ ಕುಳಿತುಕೊಳ್ಳಲು ಕುರ್ಚಿಯನ್ನೂ ನೀಡುತ್ತಿಲ್ಲ. ನಾನು ಲೈಬ್ರರಿಗೆ ಹೋದರೂ ನಿಂತುಕೊಂಡೇ ಪುಸ್ತಕಗಳನ್ನು ಓದಬೇಕು. ನಾನು ಕರ್ನಾಟಕದಲ್ಲಿ ಈ ಹಿಂದೆ ಬಂಧೀಖಾನೆ ಸಚಿವನಾಗಿದ್ದವನು ಎಂದು ನ್ಯಾಯಾಧೀಶರ ಬಳಿ ಕೋರ್ಟ್ನಲ್ಲಿ ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು, ಒಬ್ಬ ವಿಚಾರಣಾಧೀನ ಕೈದಿ ಬ್ಯಾರಕ್ನಿಂದ ಹೊರಗೆ ಬಂದಾಗ, ಲೈಬ್ರರಿಯಲ್ಲಿ ಪುಸ್ತಕ ಓದುವಾಗ ಆತನಿಗೆ ಕುರ್ಚಿ ಕೊಡಲು ಸಾಧ್ಯವಿಲ್ಲ ಎಂದಾದರೆ ಯಾಕಾಗಿ ಆ ಕುರ್ಚಿಗಳನ್ನು ಇಡಲಾಗಿದೆ ಎಂದು ಪೊಲೀಸರನ್ನು ಪ್ರಶ್ನಿಸಿದ್ದಾರೆ.