ಬೆಂಗಳೂರು, ಅ.15(Daijiworld News/SS): ರಾಜಕೀಯ ಪ್ರೇರಿತವಾಗಿ ದಾಳಿ ನಡೆಯುತ್ತಿದೆ. ದಾಳಿಯ ಹಿಂದೆ ರಾಜಕೀಯ ಕಾರ್ಯಸೂಚಿ ಕೆಲಸಮಾಡುತ್ತಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಹೇಳಿದ್ದಾರೆ.
ಕಾಂಗ್ರೆಸ್, ಬಿಜೆಪಿಯವರಂತೆ ಕಂಡಕಂಡವರನ್ನೆಲ್ಲ ಪಕ್ಷಕ್ಕೆ ಸೇರ್ಪಡೆಗೊಳಿಸುವುದಿಲ್ಲ. ಅಭ್ಯರ್ಥಿಗಳ ಅರ್ಹತೆ ಆಧಾರದ ಮೇಲೆ ಸೇರಿಸಿಕೊಳ್ಳಲಾಗುತ್ತದೆ. ಪಕ್ಷ ಸೇರ್ಪಡೆ ಬಗ್ಗೆ ಮೊದಲು ಚರ್ಚಿಸಿ ಸಾಧಕ ಬಾಧಕಗಳ ಬಗ್ಗೆ ಚಿಂತನೆ ನಡೆಸಿ ಆನಂತರ ಕ್ರಮಕೈಗೊಳ್ಳಲಾಗುವುದು. ಉಪ ಚುನಾವಣೆಯಲ್ಲಿ ಪಕ್ಷ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ಐಟಿ, ಇಡಿ, ಸಿಬಿಐ ಸಂಸ್ಥೆಗಳನ್ನು ಆಯುಧಗಳಂತೆ ಬಳಸಿಕೊಳ್ಳುತ್ತಿದೆ. ಚುನಾವಣಾ ಸಂದರ್ಭದಲ್ಲಿ ಇಂತಹ ನಾಟಕ ಸಾಮಾನ್ಯ. ಕಾಂಗ್ರೆಸ್ಸಿಗರು ಕಾನೂನಿಗೆ ಬದ್ಧರಾಗಿದ್ದಾರೆ. ಐಟಿ ದಾಳಿ ಕಾಂಗ್ರೆಸ್ ನಾಯಕರ ಮೇಲಷ್ಟೇ ಏಕೆ ನಡೆಯುತ್ತಿವೆ...? ಬಿಜೆಪಿಯ ನಾಯಕರ ಮೇಲೂ ಸಾಕಷ್ಟು ದೂರುಗಳು ಸಲ್ಲಿಕೆಯಾಗಿವೆ. ಅವರ ವಿರುದ್ಧ ಏಕೆ ಕ್ರಮ ತೆಗೆದುಕೊಳ್ಳುತ್ತಿಲ್ಲ..? ಐಟಿ,ಇಡಿ, ಸಿಬಿಐ ಇಲಾಖೆಗಳು ಏಕಪಕ್ಷೀಯವಾಗಿ ಕೆಲಸ ನಿರ್ವಾಹಿಸುತ್ತಿದ್ದು, ಈ ಸಂಸ್ಥೆಗಳು ಕೇಂದ್ರದ ಕೈಗೊಂಬೆಗಳಾಗಿವೆ ಎಂದು ವೇಣುಗೋಪಾಲ್ ಅಸಮಾಧಾನ ವ್ಯಕ್ತಪಡಿಸಿದರು.