ಶ್ರೀನಗರ, ಅ.16(Daijiworld News/SS): ಜಮ್ಮು – ಶ್ರೀನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಸರ್ಕಾರಿ ಹಾಗೂ ಭದ್ರತಾ ಪಡೆಗಳ ವಾಹನಗಳನ್ನು ಉಗ್ರರು ಗುರಿಯಾಗಿಸಿಕೊಂಡು ದಾಳಿ ನಡೆಸುವ ಸಾಧ್ಯತೆಗಳಿವೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ.
ಮಾತ್ರವಲ್ಲ, ಜಮ್ಮು- ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿದನ್ನು ವಿರೋಧಿಸಿ ಶ್ರೀನಗರದ ಲಾಲ್ಚೌಕ್ ಮತ್ತು ಪ್ರತಾಪ್ ಪಾರ್ಕ್ ಬಳಿ ಪ್ರತಿಭಟನೆ ನಡೆಸುತ್ತಿದ್ದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾರ ಮಗಳು ಸಫಿಯಾ ಅಬ್ದುಲ್ಲಾ ಖಾನ್, ಸಹೋದರಿ ಸುರೈಯಾ ಅಬ್ದುಲ್ಲಾ, ಹೈಕೋರ್ಟ್ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಬಶೀರ್ ಅಹ್ಮದ್ ಖಾನ್ರ ಪತ್ನಿ ಹವಾ ಬಶೀರ್ ಸೇರಿ ಹಲವು ಮಹಿಳೆಯರನ್ನು ಭದ್ರತಾ ಪಡೆಗಳು ಬಂಧಿಸಿವೆ. ಇದರಿಂದ ಕಾಶ್ಮೀರದಲ್ಲಿ ಮತ್ತೆ ಬಿಗುವಿನ ವಾತಾವರಣ ನಿರ್ವಣವಾಗಿದೆ.
ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಿದ್ದ ಮಹಿಳೆಯರನ್ನು ವಶಕ್ಕೆ ಪಡೆದು ಸೆಂಟ್ರಲ್ ಜೈಲ್ಗೆ ಸ್ಥಳಾಂತರಿಸಲಾಗಿದೆ. ಬಂಧನವನ್ನು ಖಂಡಿಸಿದ ಸುರೈಯಾ ಅಬ್ದುಲ್ಲಾ, ಆ.5ರಿಂದ ನಮ್ಮನ್ನು ಮನೆಯೊಳಗೆ ಕೂಡಿ ಹಾಕಿ ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಲಾಗಿದೆ. ಇದು ಬಲವಂತದ ನಿರ್ಧಾರವಾಗಿದ್ದು, ಇಂಥದಕ್ಕೆ ಆಸ್ಪದವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
72 ದಿನಗಳಿಂದ ಸ್ಥಗಿತಗೊಂಡಿದ್ದ ಪೋಸ್ಟ್ಪೇಡ್ ಮೊಬೈಲ್ ಸೇವೆಯನ್ನು ಸೋಮವಾರ ಮಧ್ಯಾಹ್ನದಿಂದ ಪುನಃ ಆರಂಭಿಸಿದ ಬೆನ್ನಲ್ಲೇ ಎಸ್ಎಂಎಸ್ ಸೇವೆ ಸ್ಥಗಿತ ಮಾಡಲಾಗಿದೆ. ಮುಂಜಾಗೃತಾ ಕ್ರಮವಾಗಿ ಎಸ್ಎಂಎಸ್ ಸಂದೇಶಕ್ಕೆ ನಿರ್ಬಂಧ ವಿಧಿಸಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರೀಪೇಡ್ ಹಾಗೂ ಇಂಟರ್ನೆಟ್ ಸೇವೆಗಳನ್ನು ಇನ್ನೂ ನೀಡಿಲ್ಲ. ಆದರೆ, ರಾಜ್ಯಪಾಲ ಸತ್ಯಪಾಲ್ ಮಲಿಕ್ ಶೀಘ್ರದಲ್ಲೇ ಇಂಟರ್ನೆಟ್ ಸೇವೆ ಆರಂಭಿಸಲಾಗುವುದು ಎಂದಿದ್ದಾರೆ.