ನವದೆಹಲಿ, ಅ.16(Daijiworld News/SS): ಸಶಸ್ತ್ರ ಪಡೆಗಳ ಅಗತ್ಯಗಳಿಗೆ ದೇಶೀಯ ಪರಿಹಾರ ಒದಗಿಸಲು ಡಿಆರ್ಡಿಒ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಭೂ ಸೇನೆ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹೇಳಿದರು.
ಭಾರತದ ರಕ್ಷಣಾ ಉದ್ಯಮ ಪ್ರಗತಿಯ ಹಾದಿಯಲ್ಲಿದೆ. ಭವಿಷ್ಯದ ಯುದ್ಧಗಳಿಗೆ ಬೇಕಾದ ಸುಧಾರಿತ ತಂತ್ರಜ್ಞಾನದ ವ್ಯವಸ್ಥೆಗಳತ್ತ ನಾವು ಚಿತ್ತ ಹರಿಸಬೇಕಿದೆ. ಸ್ಪರ್ಶರಹಿತ ಸಮರಕ್ಕೆ ನಾವು ತಯಾರಿ ನಡೆಸಬೇಕಿದೆ ಎಂದು ಹೇಳಿದರು.
ದೇಶದ ರಕ್ಷಣಾ ಕ್ಷೇತ್ರದ ಅವಶ್ಯಕತೆಗಳನ್ನು ಪೂರೈಸಲು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಸರ್ವ ಪ್ರಯತ್ನ ನಡೆಸುತ್ತಿದೆ. ಮುಂದೆ ಯುದ್ಧವೇನಾದರೂ ಸಂಭವಿಸಿದರೆ ಸ್ವದೇಶಿ ನಿರ್ವಿುತ ಶಸ್ತ್ರಾಸ್ತ್ರಗಳೊಂದಿಗೆ ಹೋರಾಡಿ ಜಯಗಳಿಸುವುದು ಶತಸ್ಸಿದ್ಧ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೃತಕ ಬುದ್ಧಿಮತ್ತೆಯೊಂದಿಗೆ ಸೈಬರ್, ಬಾಹ್ಯಾಕಾಶ ತಂತ್ರಜ್ಞಾನ, ಲೇಸರ್, ಎಲೆಕ್ಟ್ರಾನಿಕ್ ಯುದ್ಧತಂತ್ರ ಮತ್ತು ರೊಬಾಟಿಕ್ಸ್ ಮೇಲೆ ಭವಿಷ್ಯ ಅವಲಂಬಿಸಿದೆ. ಈ ನಿಟ್ಟಿನಲ್ಲಿ ಸೇನೆ ಮತ್ತು ಡಿಆರ್ಡಿಒ ಜಂಟಿಯಾಗಿ ಸಂಶೋಧನೆ ನಡೆಸಬೇಕು ಎಂದು ರಾವತ್ ಸಲಹೆ ನೀಡಿದರು.