ಬೆಂಗಳೂರು, ಅ.16(Daijiworld News/SS): ಬಾಂಗ್ಲಾ ಉಗ್ರರ ಅಡಗುದಾಣ ಬಗ್ಗೆ ಎಚ್ಚರಿಕೆ ಹಿನ್ನೆಲೆಯಲ್ಲಿ ಬೆಂಗಳೂರಲ್ಲಿ ಎಟಿಎಸ್ ರಚನೆ ಮಾಡಲಾಗುತ್ತಿದೆ. ನಗರಕ್ಕೆ ಉಗ್ರರ ಭೀತಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಸಿಮೀತವಾಗಿ ನವೆಂಬರ್ 1ರಿಂದ ಭಯೋತ್ಪಾದನಾ ನಿಗ್ರಹ ದಳ ಆರಂಭಿಸಲಾಗುವುದು ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ಬಾಂಗ್ಲಾದ ಜೆಎಂಬಿ ಉಗ್ರ ಸಂಘಟನೆಯ ಸದಸ್ಯರಿಗೆ ಬೆಂಗಳೂರು ಆಶ್ರಯ ತಾಣವಾಗಿದೆ ಎಂದು ರಾಷ್ಟ್ರೀಯ ತನಿಖಾ ದಳ ಆತಂಕ ವ್ಯಕ್ತಪಡಿಸಿದ ಬೆನ್ನಲ್ಲೇ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ ಗೃಹ ಸಚಿವರು, ರಾಜಧಾನಿಗೆ ಪ್ರತ್ಯೇಕ ಉಗ್ರ ನಿಗ್ರಹ ಪಡೆ ರಚನೆಗೆ ಸೂಚನೆ ನೀಡಿದ್ದಾರೆ.
ಈಗಾಗಲೇ ದೇಶದ ಬೃಹತ್ ನಗರಗಳಾದ ದೆಹಲಿ, ಚೆನ್ನೈ, ಹೈದರಾಬಾದ್ ಹಾಗೂ ಮುಂಬೈನಲ್ಲಿ ಪ್ರತ್ಯೇಕವಾಗಿ ಉಗ್ರ ನಿಗ್ರಹ ಪಡೆಗಳಿವೆ. ಇದೇ ಮಾದರಿಯಲ್ಲಿ ಬೆಂಗಳೂರಿಗೆ ಸಹ ಪ್ರತ್ಯೇಕ ಎಟಿಎಸ್ ಘಟಕ ಸ್ಥಾಪನೆಗೆ ಸರ್ಕಾರ ನಿರ್ಧರಿಸಿದ್ದು, ಈ ಕುರಿತು ಶೀಘ್ರವೇ ರೂಪುರೇಷೆ ಸಿದ್ಧವಾಗಲಿದೆ ಎಂದು ತಿಳಿಸಿದ್ದಾರೆ.
ಶಂಕಾಸ್ಪದ ವ್ಯಕ್ತಿಗಳು ಕಂಡ ತಕ್ಷಣವೇ ವಶಕ್ಕೆ ಪಡೆದು ಪೂರ್ವಾಪರ ವಿವರ ಸಂಗ್ರಹಿಸಬೇಕು. ಹಾಗೆಯೇ ಐತಿಹಾಸಿಕ ಸ್ಥಳಗಳು, ವಿಮಾನ, ಏರ್ಪೋರ್ಟ್, ಮೆಟ್ರೋ ನಿಲ್ದಾಣಗಳು, ಶಾಪಿಂಗ್ ಮಾಲ್, ದೇವಸ್ಥಾನ, ಪ್ರಾರ್ಥನಾ ಮಂದಿರ, ಧಾರ್ಮಿಕ ಕೇಂದ್ರಗಳಿಗೆ ಭದ್ರತೆ ಒದಗಿಸಬೇಕು ಎಂದು ಹೇಳಿದರು.