ನವದೆಹಲಿ, ಅ 16 (Daijiworld News/MSP): ’ನಾವ್ ಮನೆ ಬಿಡೋದಿಲ್ಲ’ ಎಂದು ಪಟ್ಟು ಹಿಡಿದು ಕುಳಿತಿದ್ದ ಮಾಜಿ ಸಂಸದರ ನಿವಾಸಗಳಿಗೆ ನೀರು,ವಿದ್ಯುತ್, ಗ್ಯಾಸ್ ಸಂಪರ್ಕ, ಕಡಿತಗೊಳಿಸಲು ಲೋಕಸಭೆಯ ವಸತಿ ಸಮಿತಿ ಆದೇಶ ನೀಡಿದೆ.
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಮೇ 25ರಂದು 16ನೇ ಲೋಕಸಭೆಯನ್ನು ವಿಸರ್ಜನೆಗೊಳಿಸಿದ್ದರೂ ನಿವಾಸ ತೆರವುಗೊಳಿಸದೇ 27 ಮಾಜಿ ಸಂಸದರು ತಂಗಿದ್ದು, ಇದರಿಂದ ನೂತನ ಸಂಸದರಿಗೆ ನಿವಾಸ ಹಂಚಿಕೆ ಮಾಡಲು ಸಾಧ್ಯವಾಗುತ್ತಿಲ್ಲ. ಹೊಸ ಸದಸ್ಯರಿಗೆ ವೆಸ್ಟರ್ನ್ ಕೋರ್ಟ್ ಪ್ರದೇಶದಲ್ಲಿರುವ ಆಯಾ ರಾಜ್ಯಗಳ ಅತಿಥಿ ಗೃಹಗಳಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ.
ಬಿಜೆಪಿ ಸಂಸದ ಸಿ.ಆರ್ ಪಾಟೀಲ್ ನೇತೃತ್ವದ ಸಮಿತಿ ನಿವಾಸ ತೆರವು ಮಾಡಿ ಎಂದು ಸೂಚನೆ ನೀಡಿದ್ದರೂ ಅದನ್ನು ಕ್ಯಾರೇ ಮಾಡದೆ ಇರುವ ಮಾಜಿ ಸಂಸದರನ್ನು ಹೊರ ಹಾಕಲು ನವದೆಹಲಿಯ ಪೊಲೀಸರ ನೆರವನ್ನು ಪಡೆಯಲು ನಿರ್ಧರಿಸಲಾಗಿದೆ.
ಸರ್ಕಾರಿ ಬಂಗಲೆ ಖಾಲಿ ಮಾಡದ 200 ಮಾಜಿ ಸಂಸದರಿಗೆ ಆಗಸ್ಟ್ 19ರಂದು ಲೋಕಸಭೆಯ ವಸತಿ ಸಮಿತಿ ನೊಟೀಸ್ ಕೊಟ್ಟಿತ್ತು. ಒಂದು ವಾರದೊಳಗೆ ಬಂಗಲೆ ಖಾಲಿ ಮಾಡುವಂತೆ ಸೂಚಿಸಲಾಗಿತ್ತು. ಆದರೆ ಬಹುತೇಕ ಮಾಜಿ ಸಂಸದರು ಸರ್ಕಾರಿ ಬಂಗಲೆ ಖಾಲಿ ಮಾಡಿದ್ರು 27 ಮಾಜಿ ಸಂಸದರು ಮಾತ್ರ ಜಪ್ಪಯ್ಯ ಅಂದರೂ ಅದೇ ಮನೆಯಲ್ಲಿ ವಾಸ್ತವ್ಯ ಹೂಡಿದ್ದಾರೆ. ಇದರಿಂದ ಅಸಮಾಧಾನಗೊಂಡಿರುವ ಲೋಕಸಭೆಯ ವಸತಿ ಸಮಿತಿ, ಮನೆ ಖಾಲಿ ಮಾಡದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ನಿರ್ಧರಿಸಿದ್ದು ಈ ನಿವ್ಬಾಸಗಳ ನೀರು,ವಿದ್ಯುತ್, ಗ್ಯಾಸ್ ಸಂಪರ್ಕ, ಕಡಿತಗೊಳಿಸಲು ಸೂಚಿಸಿದೆ.