ನವದೆಹಲಿ,ಅ 16 (Daijiworld News/MSP): ಸುಪ್ರೀಂ ಕೋರ್ಟ್ ನಲ್ಲಿ ಇಂದು ರಾಮ ಜನ್ಮಭೂಮಿ ಮತ್ತು ಬಾಬರಿ ಮಸೀದಿ ಪ್ರಕರಣದ ವಿಚಾರಣೆ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ಮುಖ್ಯ ನ್ಯಾಯಮೂರ್ತಿಗಳ ಮುಂದೆಯೇ ಹೈಡ್ರಾಮಾ ನಡೆದಿದೆ.
ಅಯೋಧ್ಯೆ ಪ್ರಕರಣದ ವಿಚಾರಣೆಯ ಕೊನೆ ದಿನವಾದ ಬುಧವಾರ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾ. ರಂಜನ್ ಗೊಗೋಯ್ ನೇತೃತ್ವದ ಪೀಠದಲ್ಲಿ ವಿಚಾರಣೆ ನಡೆಯುತಿತ್ತು. ಈ ವೇಳೆ ಹಿಂದೂ ಮಹಾಸಭಾ ಪರ ವಕೀಲ ವಿಕಾಸ್ ಸಿಂಗ್ ಅವರು, ಮಾಜಿ ಐಪಿಎಸ್ ಅಧಿಕಾರಿ ಕಿಶೋರ್ ಕುನಾಲ್ ಬರೆದ ‘ಅಯೋಧ್ಯೆ ರಿವಿಸಿಟೆಡ್’ ಪುಸ್ತಕವನ್ನು ಉಲ್ಲೇಖಿಸಿ ಆಯೋಧ್ಯೆಯಲ್ಲಿ ರಾಮಮಂದಿರ ಅಸ್ತಿತ್ವದಲ್ಲಿ ಇತ್ತು ಎನ್ನುವುದಕ್ಕೆ ಈ ಪುಸ್ತಕ ಮತ್ತಷ್ಟು ಮಾಹಿತಿ ನೀಡುತ್ತದೆ ಎಂದು ಕೋರ್ಟ್ ಗಮನಕ್ಕೆ ತಂದರು. ಇದನ್ನು ಸುನ್ನಿ ವಕ್ಫ್ ಬೋರ್ಡ್ ಪರ ವಕೀಲ ರಾಜೀವ್ ಧವನ್ ವಿರೋಧಿಸಿದರು.
ಮಾತ್ರವಲ್ಲದೆ ಹಿಂದೂ ಮಹಾಸಭಾ ಸಲ್ಲಿಸಿದ್ದ ರಾಮಮಂದಿರ ನಕ್ಷೆಯನ್ನು ಮುಸ್ಲಿಂ ಪರ ವಕೀಲ ರಾಜೀವ್ ಧವನ್ ಹರಿದು ಹಾಕಿದ್ದಾರೆ, ಇದರಿಂದ ಅಸಮಾಧಾನಕೊಂಡ ಮುಖ್ಯ ನ್ಯಾಯಮೂರ್ತಿಗಳು ಕಲಾಪದಿಂದ ಹೊರನಡೆಯಬೇಕಾದಿತು ಎಂದು ಎಚ್ಚರಿಕೆ ನೀಡಿದ್ದಾರೆ.