ನವದೆಹಲಿ, ಅ 16 (DaijiworldNews/SM): ಅಯೋಧ್ಯೆಯಲ್ಲಿ ರಾಮಮಂದಿರ-ಬಾಬ್ರಿ ಮಸೀದಿ ಭೂ ವಿವಾದಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ತೀರ್ಪು ಕಾಯ್ದಿರಿಸಿದೆ. ಕಳೆದ ಎರಡು ತಿಂಗಳಿಂದ ಪ್ರತಿದಿನ ನಿರಂತರ ವಿಚಾರಣೆ ನಡೆಸಿತ್ತು. ಸುದೀರ್ಘ ವಿಚಾರಣೆ ಬಳಿಕ ಇದೀಗ ತೀರ್ಪು ಕಾಯ್ದಿರಿಸಿದೆ.
ಪ್ರಕರಣದ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ ನಡೆಸಿ ತೀರ್ಪು ಕಾಯ್ದಿರಿಸಿದೆ.
ವಿಚಾರಣೆಯ ಕೊನೆಯ ದಿನವಾದ ಬುಧವಾರಂದು ನ್ಯಾಯಾಲಯದಲ್ಲಿ ಕೆಲ ಹೈಡ್ರಾಮಗಳು ನಡೆದವು. ವಿಚಾರಣೆ ವೇಳೆ ಮಾಜಿ ಐಪಿಎಸ್ ಅಧಿಕಾರಿ ಕಿಶೋರ್ ರಚಿಸಿರುವ ‘ಅಯೋಧ್ಯಾ ರಿವಿಸಿಟೆಡ್’ ಎಂಬ ಹೆಸರಿನ ಪುಸ್ತಕವನ್ನು ಹಿಂದೂ ಮಹಾಸಭಾ ವಕೀಲ, ವಿಕಾಸ್ ಸಿಂಗ್ ನ್ಯಾಯಾಲಯದ ಮುಂದೆ ಹಾಜರುಪಡಿಸಿದರು. ಆದರೆ, ಇದಕ್ಕೆ ಮುಸ್ಲಿಂ ಸಂಘಟನೆಗಳ ಪರವಾದ ವಕೀಲರು ಆಕ್ಷೇಪ ವ್ಯಕ್ತಪಡಿಸಿದರು. ಮಾತ್ರವಲ್ಲದೆ, ಪುಸ್ತಕ ಹಾಗೂ ನಕ್ಷೆಯನ್ನು ಹರಿದುಹಾಕಿದರು. ಇದರಿಂದ ಕೆಲಕಾಲ ಗೊಂದಲದ ವಾತಾವಣ ನಿರ್ಮಾಣವಾಗಿತ್ತು.
1986ರಲ್ಲಿ ಈ ಪುಸ್ತಕ ರಚಿಸಲಾಗಿತ್ತು. ಈ ಪುಸ್ತಕವನ್ನು ದಾಖಲೆಯನ್ನಾಗಿ ನ್ಯಾಯಾಲಯ ಪರಿಗಣಿಸಬಾರದೆಂದು ಧವನ್ ಆಕ್ಷೇಪಪಡಿಸಿದರು. ಆದರೆ, ಪುಸ್ತಕ ಮತ್ತು ನಕ್ಷೆಯನ್ನು ಹರಿದು ಹಾಕಿದ ಸುನ್ನಿ ವಕ್ಫ್ ಮಂಡಳಿಯ ವಕೀಲ ರಾಜೀವ್ ಧವನ್ ಅವರ ವರ್ತನೆಗೆ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅಸಮಾಧಾನ ವ್ಯಕ್ತಪಡಿಸಿದರು. ಒಂದು ಹಂತದಲ್ಲಿ ವಕೀಲರು ಮತ್ತು ಮುಖ್ಯ ನ್ಯಾಯಮೂರ್ತಿಗಳ ನಡುವೆ ವಾಗ್ವಾದ ನಡೆಯಿತು.