ಬೆಂಗಳೂರು, ಅ.17(Daijiworld News/SS): ಸ್ಥಳೀಯ ವಿಷಯಗಳನ್ನು ಮುಖ್ಯವಾಗಿ ಪ್ರಚಾರಕ್ಕೆ ಬಳಸಬೇಕು. ಆದರೆ ಈಗ ಅದು ಆಗುತ್ತಿಲ್ಲ ಎಂದು ಪರೋಕ್ಷವಾಗಿ ಮೋದಿ ವಿರುದ್ಧ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅಸಮಾಧಾನ ವ್ಯಕ್ತಪಡಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೇಶದ ಆರ್ಥಿಕತೆಗಿಂತ ಸಂವಿಧಾನದ 370 ವಿಧಿ ಬಗ್ಗೆಯೇ ಹೆಚ್ಚು ನಂಬಿಕೆ. ಸದ್ಯ ದೇಶದ ಆರ್ಥಿಕ ಸ್ಥಿತಿ ಸರಿಯಿಲ್ಲ. ಆದರೆ ಮೋದಿ ಅವರಿಗೆ 370 ವಿಧಿಯನ್ನು ರದ್ದುಗೊಳಿಸಿದ್ದರ ಬಗ್ಗೆ ಹೆಚ್ಚಿನ ನಂಬಿಕೆ ಇದೆ. ಇದನ್ನೆ ಮುಂದಿಟ್ಟುಕೊಂಡು ಎರಡು ರಾಜ್ಯಗಳ ಚುನಾವಣೆ ಮೋದಿ ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.
ದೇಶದ ಆರ್ಥಿಕ ಪರಿಸ್ಥಿತಿ ಬಗ್ಗೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಪತಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಿರ್ಮಲಾ ಸೀತರಾಮನ್ ಪತಿ ಬಿಜೆಪಿ ಪಕ್ಷದವರಲ್ಲ. ಆದರೆ ಸದ್ಯ ದೇಶದ ಆರ್ಥಿಕ ಸ್ಥಿತಿ ಸರಿಯಿಲ್ಲ. ಹೀಗಾಗಿ ಅವರ ಹೇಳಿಕೆ ಸರಿಯಾಗಿದೆ. ವಿಶ್ಚ ಬ್ಯಾಂಕ್ ಸೇರಿದಂತೆ ಹಲವು ಸಂಸ್ಥೆಗಳು ಪರಿಸ್ಥಿತಿ ಸರಿ ಇಲ್ಲ ಅಂತ ಹೇಳಿದ್ದಾರೆ. ಪ್ರಧಾನಿ ಮೋದಿ ಅವರಿಗೂ ಇದರ ಬಗ್ಗೆ ಗೊತ್ತಿದೆ ಎಂದು ಹೇಳಿದರು.
ರಾಜ್ಯ ಸರ್ಕಾರದ ಸಾಲಮನ್ನಾ ವಿಚಾರವಾಗಿ ಮಾತನಾಡಿದ ಅವರು, ಎಚ್.ಡಿ.ಕುಮಾರಸ್ವಾಮಿ ಸಿಎಂ ಆಗಿದ್ದಾಗ 24 ಗಂಟೆಯೊಳಗೆ ಸಾಲಮನ್ನಾ ಮಾಡಬೇಕು ಅಂತ ಯಡಿಯೂರಪ್ಪ ಒತ್ತಾಯ ಮಾಡಿದ್ದರು. ಕುಮಾರಸ್ವಾಮಿ ಸಿಎಂ ಆದಾಗ ಸಹಕಾರಿ ಬ್ಯಾಂಕುಗಳ ಸಾಲಮನ್ನಾಕ್ಕೆ ಹಣ ಎತ್ತಿಟ್ಟಿದರು. ಸಹಕಾರಿ ಬ್ಯಾಂಕ್ನ ಸಾಲ ಬಹುತೇಕ ಪೂರ್ಣವಾಗಿದೆ. ಶೆಡ್ಯುಲ್ಡ್ ಬ್ಯಾಂಕ್ ಸಾಲದ ಬಗ್ಗೆ ಸ್ವಲ್ಪ ಗೊಂದಲವಿದೆ. ನಾನು ಮುಖ್ಯ ಕಾರ್ಯದರ್ಶಿಗಳ ಜೊತೆ ಮಾತಾಡಿದ್ದೇನೆ. ಸಹಕಾರ ಬ್ಯಾಂಕ್ ಸಾಲಮನ್ನಾಗೆ ಇಟ್ಟಿದ್ದ ಹಣದಲ್ಲಿ ಇನ್ನು ಸ್ವಲ್ಪ ಉಳಿದಿದೆ. ಉಳಿದ ಹಣ ಪ್ರವಾಹ ಪರಿಸ್ಥಿತಿ ನಿಭಾಯಿಸಲು ಬಳಸಿಕೊಳ್ಳಲಾಗುತ್ತಿದೆ ಅನ್ನಿಸುತ್ತದೆ ಎಂದು ಹೇಳಿದರು.