ಬೆಂಗಳೂರು, ಅ.17(Daijiworld News/SS): ಬಿಜೆಪಿ ತನ್ನ ಬಣ್ಣ ಬಯಲಾಗುತ್ತದೆ ಎಂಬ ಭಯದಿಂದ ವಿಧಾನಸಭೆ ಅಧಿವೇಶನವನ್ನು ಹೆಚ್ಚು ದಿನ ನಡೆಸಲು ಬಿಡಲಿಲ್ಲ ಎಂದು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಚರ್ಚೆ ಮಾಡದೆಯೇ ಬಜೆಟ್ ಪಾಸ್ ಮಾಡಿಕೊಂಡಿದ್ದಾರೆ. ಪ್ರವಾಹದ ಪರಿಹಾರ ಕಾರ್ಯದಲ್ಲಿ ಭಾಗಿಯಾಗಬೇಕು. ಹೀಗಾಗಿ ಮೂರು ದಿನ ಅಧಿವೇಶನ ಸಾಕು ಎಂದು ಸುಳ್ಳು ಹೇಳಿದರು. ಈಗ ಒಬ್ಬ ಸಚಿವರಾದರೂ ಪ್ರವಾಹ ಪೀಡಿತ ಪ್ರದೇಶಗಳಿಗೆ ಹೋಗಿದ್ದಾರಾ..? ಅಸೆಂಬ್ಲಿಯಲ್ಲಿ ಸುಳ್ಳು ಹೇಳುವುದು ಜನರಿಗೆ ಸುಳ್ಳು ಹೇಳಿದಂತೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಕೇಶವಕೃಪದ ಆರೆಸ್ಸೆಸ್ ಮುಖಂಡರ ಸೂಚನೆಯಂತೆ ಕುಣಿಯುತ್ತಾರೆ. ವಿಧಾನಸಭೆ ಅಧಿವೇಶನದಲ್ಲಿ ನನಗೂ ಅವರಿಗೂ ಮಾತುಕತೆ ನಡೆಯಿತು. ವಿರೋಧಪಕ್ಷದ ನಾಯಕರಿಗೆ ಸಮಯ ಮಿತಿ ನೀಡಿ, ಇಷ್ಟರಲ್ಲಿಯೇ ನಿಮ್ಮ ಮಾತು ಮುಗಿಸಬೇಕು ಎಂದು ಹೇಳಿದರು. ಅದಕ್ಕೆ ನಾನು ಒಪ್ಪಲಿಲ್ಲ. ಈ ರೀತಿ ಪ್ರತಿಪಕ್ಷ ನಾಯಕರಿಗೆ ಸಮಯ ಮಿತಿ ಹೇರಿದ್ದನ್ನು ನಾನು ಇದುವರೆಗೂ ನೋಡಿಯೇ ಇಲ್ಲ. ನಾನು ಸಿಎಂ ಆಗಿದ್ದಾಗ ವಿರೋಧಪಕ್ಷದವರಿಗೆ ಸಮಯ ಕೊಟ್ಟು ಮಾತನಾಡಲಿ ಎನ್ನುತ್ತಿದ್ದೆ. ಪ್ರಜಾಪ್ರಭುತ್ವದಲ್ಲಿ ಈ ರೀತಿಯ ನಿರ್ಬಂಧಕ್ಕೆ ವಿಧಿಸುವುದಕ್ಕೆ ಅವಕಾಶವಿಲ್ಲ ಎಂದು ಕಿಡಿಕಾರಿದರು.