ಮುಂಬೈ, ಅ.17(Daijiworld News/SS): ಪ್ರಧಾನಿ ಚಂದ್ರಯಾನ ಯೋಜನೆ ಮತ್ತು ಜಮ್ಮು ಮತ್ತು ಕಾಶ್ಮೀರದ 370ನೇ ವಿಧಿ ಕುರಿತು ಮಾತನಾಡುತ್ತಾರೆ. ಆದರೆ ರೈತರ ಸಂಕಷ್ಟ ಹಾಗೂ ನಿರುದ್ಯೋಗದ ಬಗ್ಗೆ ಮೌನ ವಹಿಸುತ್ತಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು.
ಕಳವು ಮಾಡಲು ಜನರ ಗಮನವನ್ನು ಬೇರೆಡೆ ಸೆಳೆಯುವ ಜೇಬುಗಳ್ಳರಂತೆ ಪ್ರಧಾನಿ ನರೇಂದ್ರ ಮೋದಿ ಜನರ ಗಮನದ ದಿಕ್ಕು ಬದಲಿಸುವ ತಂತ್ರ ಬಳಸುತ್ತಿದ್ದಾರೆ. ಮೋದಿ ಅವರು ಅದಾನಿ ಮತ್ತು ಅಂಬಾನಿಯಂತಹ ಕೈಗಾರಿಕೋದ್ಯಮಿಗಳ ಲೌಡ್ಸ್ಪೀಕರ್ ಆಗಿದ್ದಾರೆ. ಕಳ್ಳತನ ಮಾಡುವ ಮುನ್ನ ಜೇಬುಗಳ್ಳ ಜನರ ಗಮನವನ್ನು ಬೇರೆಡೆ ಸೆಳೆಯುವಂತೆ ಕೆಲವು ಆಯ್ದ ಕೈಗಾರಿಕೋದ್ಯಮಿಗಳಿಗೆ ನಿಮ್ಮ ಹಣವನ್ನು ವರ್ಗಾಯಿಸುವಾಗ ನಿಮ್ಮ ಗಮನವನ್ನು ಬೇರೆಡೆಗೆ ಸೆಳೆಯುವುದಷ್ಟೇ ಅವರ ಕೆಲಸ ಎಂದು ರಾಹುಲ್ ಗಾಂಧಿ ಟೀಕಿಸಿದರು.
ಬಿಜೆಪಿ ಅಧಿಕಾರದಲ್ಲಿರುವಷ್ಟೂ ಕಾಲ ನಿರುದ್ಯೋಗವು ದೇಶವನ್ನು ಕಾಡುವುದು ಮುಂದುವರಿಯಲಿದೆ. ಬಿಜೆಪಿ ಸರ್ಕಾರದ ಶ್ರೀಮಂತ ಪರ ನೀತಿಗಳು ಭಾರತದ ಆರ್ಥಿಕತೆಯ ಸೋಲಿಗೆ ಕಾರಣವಾಗಿದೆ ಎಂದು ಹೇಳಿದರು.