ಮೈಸೂರು, ಅ 17 (Daijiworld News/MSP): ಹುಣಸೂರಿನ ಅನರ್ಹ ಶಾಸಕ ಹೆಚ್. ವಿಶ್ವನಾಥ್ 25 ಕೋಟಿ ರೂಪಾಯಿಗೆ ಸೇಲ್ ಆಗಿದ್ದಾರೆ ಎಂದು ಆರೋಪ ಮಾಜಿ ಸಚಿವ ಸಾ.ರಾ. ಮಹೇಶ್ ಅವರು ಮಾಡಿರುವ ಆರೋಪದ ಕುರಿತಂತೆ, ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಆಣೆ ಪ್ರಮಾಣ ಮಾಡುವ ಕುರಿತು ಸಾ.ರಾ. ಮಹೇಶ್ ಹಾಗೂ ಹೆಚ್. ವಿಶ್ವನಾಥ್ ನಡುವೆ ಇಂದು ದಿನ ನಿಗದಿಯಾಗಿತ್ತು.
ಹೀಗಾಗಿ ಉಭಯ ನಾಯಕರು, ಗುರುವಾರ ಬೆಳಗ್ಗೆ 9 ಗಂಟೆಗೆ ಚಾಮುಂಡೇಶ್ವರಿ ಮುಂದೆ ಆಣೆ ಪ್ರಮಾಣ ಮಾಡುವುದಾಗಿ ಹೇಳಿದ್ದರಿಂದ ಇಂದು ಏನಾಗುತ್ತದೆ ಎನ್ನುವ ಕುತೂಹಲ ಮೂಡಿತ್ತು. ನಿಗದಿತ ಸಮಯ 8 ನಿಮಿಷಕ್ಕೂ ಮೊದಲು ಅಂದರೆ 8:52ಕ್ಕೆ ವಿಶ್ವನಾಥ್ ಮೊದಲಿಗರಾಗಿ ಬೆಟ್ಟಕ್ಕೆ ಆಗಮಿಸಿ ದೇವಾಲಯ ಪ್ರವೇಶಿಸಿದರು. ಅವರು ದೇವರ ದರ್ಶನ ಪಡೆದು ಹೊರಬಂದರು. ಆ ಬಳಿಕ ಸಾರಾ ಮಹೇಶ್ ದೇವಾಲಯಕ್ಕೆ ಬಂದರು. ಈ ವಿಚಾರ ವಿಶ್ವನಾಥ್ ಅವರಿಗೆ ತಿಳಿದು ಸಾರಾ ಮಹೇಶ್ ಗಾಗಿ ಹೊರಗಡೆ ಕಾಯುತ್ತಾ ಕುಳಿತಿದ್ದರು. ಸುಮಾರು ಒಂದು ಗಂಟೆಗಳ ಕಾಲ ಕಾದರೂ ಮಹೇಶ್ ಮಾತ್ರ ದೇವಾಲಯದ ಒಳಗಡೆಯಿಂದ ಹೊರಬರಲೇ ಇಲ್ಲ. ಮಹೇಶ್ ಅವರು ಬಾರದ ಕಾರಣ ವಿಶ್ವನಾಥ್ ಮಾಜಿ ಸಚಿವರ ವಿರುದ್ಧ ವಾಗ್ದಾಳಿ ನಡೆಸಿದ ಹೆಚ್. ವಿಶ್ವನಾಥ್, ನಾನು ಯಾವುದೇ ಆಣೆ ಪ್ರಮಾಣ ಮಾಡುವುದಿಲ್ಲ. ಆಣೆ ಪ್ರಮಾಣ ಮಾಡವುದಾಗಿ ನಾನು ಹೇಳಿಲ್ಲ. ಆಣೆ ಪ್ರಮಾಣ ಮಾಡಲು ನಾನು ಇಲ್ಲಿಗೆ ಬಂದಿಲ್ಲ. ನನ್ನ ಖರೀದಿಸಿದ ವ್ಯಕ್ತಿ ನೋಡಲು ಕಾಯುತ್ತಿದ್ದೇನೆ. ಆತನನ್ನು ಸ್ವಾಗತಿಸಲು ಬಂದಿದ್ದೇನೆ ಎಂದರು.
ವಿಶ್ವನಾಥ್ ಹೋದ ನಂತರ ಸಾರಾ ಮಹೇಶ್ ದೇವಾಲಯದಿಂದ ಹೊರ ಬಂದು ಮಾತನಾಡಿ, ಸದನದಲ್ಲಿ ನಾನು ಹೇಳಿದ ಮಾತು ಸತ್ಯ. ನನ್ನ ಹೇಳಿಕೆಗೆ ನಾನು ಬದ್ಧನಾಗಿದ್ದೇನೆ. ದುಡ್ಡು ತಗೊಂಡಿಲ್ಲ ಎಂದು ವಿಶ್ವನಾಥ್ ಮೊದಲು ಆಣೆ ಮಾಡಲಿ. ಆ ಬಳಿಕ ಅವರನ್ನು ಖರೀದಿಸುವವರನ್ನು ಕರೆದುಕೊಂಡು ಬರೋಣ . ನಾನು ವಿಶ್ವನಾಥ್ ಅವರನ್ನು ಭೇಟಿಯಾಗುವುದಿಲ್ಲ. ಹೆಚ್. ವಿಶ್ವನಾಥ್ ನನ್ನಿಂದಾಗಿ ರಾಜೀನಾಮೆ ನೀಡಿಲ್ಲ. ಬದಲಿಗೆ ಅವರು ಆಮಿಷಕ್ಕೆ ಒಳಗಾಗಿ ರಾಜೀನಾಮೆ ನೀಡಿದ್ದಾರೆ ಎಂದು ಮಹೇಶ್ ತಿಳಿಸಿದರು. ಈ ವೇಳೆ ಮಹೇಶ್ ಕಣ್ಣೀರು ಹಾಕಿದ ಪ್ರಸಂಗವೂ ನಡೆಯಿತು.
ಹೆಚ್. ವಿಶ್ವನಾಥ್ ಅವರು ನನಗೆ ಹೊರಗೆ ಬಾ ಹೇಡಿ ಎಂದು ಹೇಳಿದ್ದಾರೆ. ಆದರೆ ದೇವಸ್ಥಾನದಿಂದ ಹೊರಗೆ ಬಂದರೆ ಅನವಶ್ಯಕವಾಗಿ ಗೊಂದಲ ಸೃಷ್ಟಿಸಿದಂತಾಗುತ್ತದೆ. ಅಲ್ಲದೆ ರಾಜ್ಯದ ಜನತೆಗೆ ಪುಕ್ಕಟೆ ಮನರಂಜನೆ ನೀಡಿದಂತಾಗುತ್ತದೆ ಎಂದು ಸಾ.ರಾ. ಮಹೇಶ್ ಇದೇ ವೇಳೇ ಮಾಧ್ಯಮಕ್ಕೆ ತಿಳಿಸಿದ್ರು.