ನವದೆಹಲಿ, ಅ.18(Daijiworld News/SS): ಐಎನ್ಎಕ್ಸ್ ಮೀಡಿಯಾ ಹಗರಣದ ಆರೋಪದಡಿ ತಿಹಾರ್ ಜೈಲಿನಲ್ಲಿದ್ದ ಪಿ.ಚಿದಂಬರಂ ಅವರು ಅಕ್ಟೋಬರ್ 24ರವರೆಗೆ ಇ.ಡಿ. ಅಧಿಕಾರಿಗಳ ವಶದಲ್ಲಿ ಇರಲಿದ್ದಾರೆ.
ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಅವರನ್ನು ಅಕ್ಟೋಬರ್ 24ರವರೆಗೆ ಇ.ಡಿ.ಕಸ್ಟಡಿಗೆ ನೀಡಿ ದೆಹಲಿ ನ್ಯಾಯಾಲಯದ ನ್ಯಾಯಾಧೀಶ ಅಜಯ್ಕುಮಾರ್ ಕುಹಾರ್ ಆದೇಶ ನೀಡಿದರು. ಕಳೆದ 2 ದಿನಗಳ ಹಿಂದೆ ತಿಹಾರ್ ಜೈಲಿನಲ್ಲಿಯೇ ಚಿದಂಬರಂ ಅವರನ್ನು ಇ.ಡಿ.ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದರು. ವಿಚಾರಣೆ ನಿಮಿತ್ತ ಇನ್ನೂ 14 ದಿನಗಳ ಕಾಲ ತಮ್ಮ ಕಸ್ಟಡಿಗೆ ನೀಡಬೇಕು ಎಂದು ಕೋರ್ಟ್ಗೆ ಮನವಿ ಮಾಡಿದ್ದರು.
ಬಳಿಕ ಪಿ.ಚಿದಂಬರಂ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ತಿಹಾರ್ ಜೈಲು ಅಧಿಕಾರಿಗಳಿಗೆ ದೆಹಲಿ ಕೋರ್ಟ್ ಬುಧವಾರ ಸೂಚನೆ ನೀಡಿತ್ತು. ಇದೀಗ ಪಿ.ಚಿದಂಬರಂ ಅವರನ್ನು ಅಕ್ಟೋಬರ್ 24ರವರೆಗೆ ಇ.ಡಿ.ಕಸ್ಟಡಿಗೆ ನೀಡಿ ಕೋರ್ಟ್ ಆದೇಶ ನೀಡಿದೆ.