ಬೆಂಗಳೂರು, ಅ.18(Daijiworld News/SS): ಬಿ.ಎಸ್. ಯಡಿಯೂರಪ್ಪ ರಾಜ್ಯ ಸರ್ಕಾರಿ ನೌಕರರಿಗೆ (5.40 ಲಕ್ಷ ಸರ್ಕಾರಿ ನೌಕರರಿಗೆ) ಶೇ.4.75 ತುಟ್ಟಿಭತ್ಯೆ ನೀಡಲು ತೀರ್ಮಾನಿಸಿದ್ದು, ಅಧಿಕೃತ ಆದೇಶ ಹೊರಬೀಳಲಿದೆ.
ಅಖಿಲ ಭಾರತ ಬೆಲೆ ಸೂಚ್ಯಂಕ ಆಧರಿಸಿ ಕೇಂದ್ರ ಸರ್ಕಾರ ನೌಕರರಿಗೆ ಜುಲೈ 1ರಿಂದ ಪೂರ್ವಾನ್ವಯವಾಗಿ ಶೇ.5 ತುಟ್ಟಿಭತ್ಯೆ ಮಂಜೂರು ಮಾಡಿ ಆದೇಶ ಹೊರಡಿಸಿತ್ತು. ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿ ರಾಜ್ಯದ ನೌಕರರಿಗೂ ಶೇ. 5 ತುಟ್ಟಿಭತ್ಯೆ ನೀಡಬೇಕೆಂದು ಮನವಿ ಸಲ್ಲಿಸಿದ್ದರು.
ಇದೀಗ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಿಎಂ, ತುಟ್ಟಿ ಭತ್ಯೆ ಹೆಚ್ಚಳಕ್ಕೆ ಸಮ್ಮತಿಸಿದ್ದಾರೆ. ಪ್ರತಿ ನೌಕರರಿಗೆ ಸರಾಸರಿ 1200 ರೂ.ನಿಂದ 4 ಸಾವಿರ ರೂ. ವರೆಗೆ ಮಾಸಿಕ ವೇತನ ಹೆಚ್ಚಳವಾಗಲಿದೆ.
ಈ ಕುರಿತು ಮಾತನಾಡಿರುವ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ, ಮನವಿ ನೀಡಿದ ಎರಡೇ ದಿನಕ್ಕೆ ಸರ್ಕಾರ ಸ್ಪಂದಿಸಿದೆ. ಇಷ್ಟೊಂದು ಶೀಘ್ರವಾಗಿ ಮನವಿಗೆ ಫಲ ಸಿಕ್ಕಿರುವುದು ಇದೇ ಮೊದಲೆನಿಸುತ್ತದೆ. ಸಿಎಂ ಬಿ.ಎಸ್.ಯಡಿಯೂರಪ್ಪಗೆ ಸಂಘದ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.