ಹೊನ್ನಾಳಿ, ಅ 18 (Daijiworld News/MSP): ಕೋಣವೊಂದು ಹೊನ್ನಾಳಿ ಪೊಲೀಸರ ನಿದ್ದೆಗೆಡಿಸಿದ್ದು, ಪ್ರಕರಣ ಗಂಭೀರ ಸ್ವರೂಪ ಪಡೆದು ಶಾಸಕರ ಪ್ರವೇಶ ಆಗುತ್ತಿದ್ದಂತೆ, ಇದೀಗ ಕೋಣದ ಮಾಲೀಕರು ಯಾರೆಂಬ ಪತ್ತೆಗೆ ಕೋಣದ ಡಿಎನ್ ಎ ಪರೀಕ್ಷೆಗೆ ಮುಂದಾಗಿದ್ದಾರೆ.
ಎರಡು ವರ್ಷಗಳ ಹಿಂದೆ ಬೇಲಿಮಲ್ಲೂರು ಗ್ರಾಮ ದೇವತೆಗೆ ಬಿಟ್ಟಿದ್ದರು ಎನ್ನಲಾದ ಕೋಣನ ಕಳವು ನಡೆದಿತ್ತು. ಹೀಗಾಗಿ ಅಂದಿನಿಂದ ಇಂದಿನವರೆಗೂ ದೇವರ ಕೋಣಕ್ಕಾಗಿ ಗ್ರಾಮಸ್ಥರು ಕೋಣಕ್ಕಾಗಿ ಶೋಧ ನಡೆಸುತ್ತಿದ್ದರು. ಕೊನೆಗೂ ಶಿವಮೊಗ್ಗ ತಾಲೂಕಿನ ಹಾರನಹಳ್ಳಿಯಲ್ಲಿ ವಾರದ ಹಿಂದೆ ಕೋಣ ಪತ್ತೆಯಾಗಿತ್ತು. ಹೀಗಾಗಿ ಅಲ್ಲಿನ ಗ್ರಾಮಸ್ಥರ ವಿರುದ್ಧ ಬೇಲಿಮಲ್ಲೂರು ಗ್ರಾಮಸ್ಥರು ಹೊನ್ನಾಳಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು.
ಕೋಣ ನಮ್ಮದು, ಅದಕ್ಕೆ 8 ವರ್ಷ ಪ್ರಾಯವಾಗಿದೆ, ಗ್ರಾಮದೇವತೆ ಬಿಟ್ಟಿರುವ ಕೋಣವನ್ನು ನಮಗೆ ಒಪ್ಪಿಸಬೇಕು ಬೇಕಾದರೆ ವೈದ್ಯಕೀಯ ಪರೀಕ್ಷೆ ನಡೆಸಿ ಎಂದು ಬೇಲಿಮಲ್ಲೂರು ಗ್ರಾಮಸ್ಥರು ಪೊಲೀಸರಲ್ಲಿ ಮನವಿ ಸಲ್ಲಿಸಿದ್ದರು. ಆದರೆ ಹಾರನಹಳ್ಳಿ ಗ್ರಾಮಸ್ಥರು ಇದಕ್ಕೆ ಒಪ್ಪದೇ, 5 ವರ್ಷಗಳ ಹಿಂದೆ ಕೋಣವನ್ನು ದೇವರಿಗೆ ಬಿಟ್ಟಿದ್ದೆವು. ಎರಡು ವರ್ಷಗಳ ಹಿಂದೆ ಕಾಣೆಯಾಗಿತ್ತು. ಇದೀಗ ಹೊನ್ನಾಳಿಯಲ್ಲಿ ಅದು ಕಂಡುಬಂದಿದ್ದರಿಂದ ನಮ್ಮ ಊರಿಗೆ ವಾಹನದಲ್ಲಿ ಕರೆದುಕೊಂಡು ಬಂದಿದ್ದೇವೆ ಎಂದು ಪೊಲೀಸರ ಮುಂದೆ ವಾದಿಸಿದ್ದಾರೆ. ಬೇಲಿಮಲ್ಲೂರು ಗ್ರಾಮಸ್ಥರು ಈ ಕೋಣದ ತಾಯಿ ಪಕ್ಕದ ಊರಲ್ಲಿದೆ. ಡಿಎನ್ ಎ ಪರೀಕ್ಷೆ ಮಾಡಿಸಿ ಎಂದು ಪಟ್ಟು ಹಿಡಿದಿದ್ದಾರೆ. ಈ ಬಗ್ಗೆ ಶಾಸಕ ಎಂ.ಪಿ ರೇಣುಕಾಚಾರ್ಯ ಗಮನಕ್ಕೆ ಗ್ರಾಮಸ್ಥರು ತಂದಿದ್ದು, ಅವರು ಕೂಡ ಡಿಎನ್ ಎ ಪರೀಕ್ಷೆಗೆ ಪಟ್ಟು ಹಿಡಿದಿದ್ದಾರೆ. ಕೋಣನನ್ನು ಪ್ರಕರಣ ತೀರ್ಮಾನವಾಗುವವರೆಗೂ ಬೇರೊಂದು ಗ್ರಾಮಕ್ಕೆ ಅಥವಾ ಗೋಶಾಲೆಯಲ್ಲಿ ಬಿಡಬೇಕು ಎಂದು ಗ್ರಾಮಸ್ಥರ ಮುಖಂಡರು ತಿಳಿಸಿದ್ದಾರೆ.
ಎರಡೂ ಗ್ರಾಮಗಳ ಮುಖಂಡರ ಸಮ್ಮಖದಲ್ಲಿ ಡಿಎನ್ಎ ಪರೀಕ್ಷೆಗಾಗಿ ಬೇಕಾದ ಮಾದರಿಗಳನ್ನು ಸಂಗ್ರಹಿಸಿ ಹೈದರಾಬಾದ್ಗೆ ಕಳುಹಿಸಿಕೊಡಬೇಕು. ಫಲಿತಾಂಶ ಬಂದ ತಕ್ಷಣ ವರದಿಯಂತೆ ಗ್ರಾಮಸ್ಥರಿಗೆ ಕೋಣನನ್ನು ಒಪ್ಪಿಸಲಾಗುವುದು’ ಒಂದು ವಾರದೊಳಗೆ ಡಿಎನ್ಎ ಪರೀಕ್ಷೆಗೆ ಬೇಕಾದ ಅಂಶಗಳನ್ನು ಸಂಗ್ರಹಿಸಿ ಕಳುಹಿಸಿಕೊಡಲಾಗುವುದು’ ಎಂದು ಸಿಪಿಐ ದೇವರಾಜ್ ತಿಳಿಸಿದರು.