ನವದೆಹಲಿ, ಅ.18(Daijiworld News/SS): ಪ್ರತಿಪಕ್ಷದವರ ಮೇಲೆ ಆರೋಪ ಹೊರಿಸುವುದು ಕೇಂದ್ರ ಸರ್ಕಾರದ ಗೀಳು ಎಂದು ಕಿಡಿಕಾರಿದ್ದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹೇಳಿಕೆಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿರುಗೇಟು ನೀಡಿದ್ದಾರೆ.
ನಾನು ಅಧಿಕಾರದಲ್ಲಿದ್ದಾಗ ಏನು ಆಯಿತೋ ಅದು ಆಗಿಹೋದ ವಿಚಾರ. ಕೆಲವು ದೌರ್ಬಲ್ಯಗಳಿದ್ದುದು ನಿಜ. ಆದರೆ ಯಾವಾಗಲೂ ತಪ್ಪು ಹುಡುಕುವುದು ಸರಿಯಲ್ಲ. ನೀವು ಐದು ವರ್ಷ ಅಧಿಕಾರದಲ್ಲಿದ್ದಿರಿ. ಕೇವಲ ಯುಪಿಎ ಮೇಲೆ ದೋಷ ಹೊರಿಸುವದರಿಂದ ಏನನ್ನೂ ಸಾಧಿಸಲಾಗದು. ಸಮಸ್ಯೆಗೆ ಕಾರಣ ಗಳನ್ನು ತಿಳಿದುಕೊಳ್ಳಲು ಆಸಕ್ತಿ ತೋರದ ಸರ್ಕಾರ, ಪ್ರತಿಪಕ್ಷಗಳ ಮೇಲೆ ಗೂಬೆ ಕೂರಿಸುವಲ್ಲೇ ಹೆಚ್ಚು ಮಗ್ನವಾಗಿದೆ. ಹೀಗಾಗಿ ಆರ್ಥಿಕತೆಯ ಪುನಶ್ಚೇತನಕ್ಕೆ ಅಗತ್ಯವಾದ ಪರಿಹಾರ ಕಂಡುಕೊಳ್ಳಲು ಅದಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಡಾ. ಮನಮೋಹನ್ ಸಿಂಗ್ ಹೇಳಿಕೆ ನೀಡಿದ್ದರು.
ಈ ಹೇಳಿಕೆಗೆ ಪ್ರತಿಕ್ರಿಯಿಸಿದ ನಿರ್ಮಲಾ ಸೀತಾರಾಮನ್, ಇನ್ನೊಬ್ಬರನ್ನು ದೂರಬೇಡಿ ಎಂಬ ಡಾ. ಮನಮೋಹನ್ ಸಿಂಗ್ ಅವರ ಹೇಳಿಕೆಯನ್ನು ನಾನು ಗೌರವಿಸುತ್ತೇನೆ. ಆದರೆ, ಕಳೆದ ಕೆಲವು ಅವಧಿಗಳಲ್ಲಿ ಯಾವಾಗ ಮತ್ತು ಏನು ತಪ್ಪಾಗಿದೆ ಎಂಬುದನ್ನು ತಾಳೆ ನೋಡಬೇಕಾಗುತ್ತದೆ. ಆದರೆ, ಈಗ ಆರ್ಥಿಕತೆ ಸರಿಯಾಗಿಲ್ಲ ಎಂದು ನಮ್ಮ ವಿರುದ್ಧವೇ ಆರೋಪಿಸಲಾಗುತ್ತಿದೆ ಎಂದು ಹೇಳಿದರು.