ಲಖನೌ, ಅ 19 (Daijiworld News/MSP): ಅಖಿಲ ಭಾರತ ಹಿಂದೂ ಮಹಾಸಭಾದ ಮಾಜಿ ನಾಯಕ ಕಮಲೇಶ್ ತಿವಾರಿ ಭೀಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಪೊಲೀಸರು ಇಬ್ಬರು ಮೌಲ್ವಿಗಳು ಸೇರಿದಂತೆ 5 ಮಂದಿಯನ್ನು ಶನಿವಾರ ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಪೈಕಿ ಮೊಹಮ್ಮದ್ ಮುಫ್ತಿ ನಯೀಮ್ ಕಜ್ಮಿ ಮತ್ತು ಇಮಾಮ್ ಮೌಲಾನಾ ಅನ್ವಾರುಲ್ ಹಕ್ ಎಂಬ ಇಬ್ಬರು ಮೌಲ್ವಿಗಳನ್ನು ಬಂಧಿಸಲಾಗಿದ್ದು, ಇವರಿಬ್ಬರ ಹೆಸರುಗಳನ್ನು ಎಫ್ಐಆರ್'ನಲ್ಲಿ ದಾಖಲಿಸಲಾಗಿದೆ ಎಂದು ಡಿಜಿಪಿ ಒಪಿ ಸಿಂಗ್ ಅವರು ಹೇಳಿದ್ದಾರೆ. ಇವರಲ್ಲದೆ ಇನ್ನೂ ಮೂವರನ್ನು ವಶಕ್ಕೆ ಪಡೆದುಕೊಳ್ಳಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ. ವಶಕ್ಕೆ ಪಡೆದ ಆರೋಪಿಗಳನ್ನು ಮೊಹ್ಸಿನ್ ಶೇಕ್, ಫೈಜಾನ್ ಮತ್ತು ರಶಿದ್ ಅಹ್ಮದ್ ಎಂದು ಗುರುತಿಸಲಾಗಿದೆ.
ತಿವಾರಿ ಹತ್ಯೆಯಾದ ಸ್ಥಳದಲ್ಲಿ ಸಿಕ್ಕಿದ್ದ ಸಿಹಿತಿಂಡಿ ಪೊಟ್ಟಣದಲ್ಲಿ ಸೂರತ್ ನ ವಿಳಾಸವಿತ್ತು. ಸೂರತ್ ನ ನವ್ ಸಾರಿ ಬಜಾರ್ ನಲ್ಲಿರುವ ಧರ್ತಿ ಫರ್ ಸನ್ ಅಂಗಡಿಯಿಂದ ಖರೀದಿಸಲಾಗಿತ್ತು. ಅಂಗಡಿಯ ಮಾಲೀಕನನ್ನು ವಿಚಾರಿಸಿ ಶಂಕಿತರ ಮಾಹಿತಿಯನ್ನು ಸೂರತ್ ಕ್ರೈಮ್ ಬ್ರಾಂಚ್ ಕಲೆ ಹಾಕಿತ್ತು. ಅಲ್ಲದೆ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಯನ್ನು ಕಲೆ ಹಾಕಿದ್ದರು.
ಹಿಂದು ಸಭಾ ನಾಯಕರಾಗಿದ್ದ ತಿವಾರಿ (45)ಯವರನ್ನು ಖುರ್ಷೆದ್ ಬಾಘ್ ನಲ್ಲಿರುವ ಅವರ ನಿವಾಸದ ಎದುರು ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಸಿಹಿತಿಂಡಿ ಪೊಟ್ಟಣದಲ್ಲಿ ಹತ್ಯೆಯ ಆಯುಧವನ್ನು ತರಲಾಗಿತ್ತು.
2015ರಲ್ಲಿ ತಿವಾರಿಯವರು ವಿವಾದಾತ್ಮಕ ಹೇಳಿಕೆಯೊಂದರನ್ನು ನೀಡಿದ್ದು, ಈ ಕಾರಣದಿಂದಲೇ ಅವರನ್ನು ಹತ್ಯೆ ಮಾಡಿರುವ ಶಂಕೆಗಳು ವ್ಯಕ್ತವಾಗಿವೆ ಎಂದು ಡಿಜಿಪಿ ತಿಳಿಸಿದ್ದಾರೆ. ತಿವಾರಿ ಅಯೋಧ್ಯೆ ಪ್ರಕರಣದಲ್ಲಿ ಸಾಕ್ಷಿದಾರರೂ ಆಗಿದ್ದರು.