ಕಡಲೂರು, ಅ 19 (Daijiworld News/MSP): ಹೋರ್ಡಿಂಗ್ ಬಿದ್ದು ಮಹಿಳಾ ಟೆಕ್ಕಿ ಸಾವನ್ನಪ್ಪಿದ್ದ ಸುದ್ದಿ ಮಾಸುವ ಮುನ್ನವೇ , ಬ್ಯಾಂಕಿನ ಜಾಹೀರಾತು ಹೋರ್ಡಿಂಗ್ ನಿಂದ ವಿದ್ಯುತ್ ಹರಿದ ಪರಿಣಾಮ ಬಾಲಕನೊಬ್ಬ ಮೃತಪಟ್ಟ ದಾರುಣ ಘಟನೆ ತಮಿಳುನಾಡಿನ ಕಡಲೂರು ಜಿಲ್ಲೆಯಲ್ಲಿ ನಡೆದಿದೆ. ಮೃತ ಬಾಲಕನನ್ನು 13 ವರ್ಷದ ದಿನೇಶ್ ಕುಮಾರ್ ಎಂದು ಗುರುತಿಸಲಾಗಿದೆ. ಏಕೈಕ ಪುತ್ರನಾಗಿದ್ದ ಈತ ಒಂಬತ್ತನೇ ತರಗತಿ ಅಭ್ಯಾಸಿಸುತ್ತಿದ್ದನು.
"ಶುಕ್ರವಾರ ಜ್ವರದಿಂದ ಬಳಲುತ್ತಿದ್ದ ಬಾಲಕ ದಿನೇಶ್ ಮೂರು ಕಿಲೋಮೀಟರ್ ದೂರದಲ್ಲಿರುವ ಅಂಬಲವನನ್ಪೆಟ್ಟೈನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿಂದ ಕುಲ್ಲಂಚವಾಡಿಯಲ್ಲಿ ತನ್ನ ಮನೆಗೆ ಸೈಕಲ್ ನಲ್ಲಿ ಹಿಂದಿರುಗುತ್ತಿದ್ದ. ಈ ವೇಳೆ ಆತನಿಗೆ ವಾಹನವೊಂದು ಎದುರಾಗಿದ್ದು, ಈ ವೇಳೆ ತನ್ನ ಸಮತೋಲನವನ್ನು ಕಳೆದುಕೊಂಡು ಎರಡು ಅಡಿ ಗಾತ್ರದ ಬ್ಯಾಂಕಿನ ಸಣ್ಣ ಜಾಹೀರಾತು ಹೋರ್ಡಿಂಗ್ ನ್ನು ಹಿಡಿದಿದ್ದಾನೆ. ಇದೇ ವೇಳೆ ಮಳೆಯಿಂದ ತೇವಗೊಂಡಿದ್ದ ಆದರೆ ಹೋರ್ಡಿಂಗ್ ಸಂಪರ್ಕಿಸಲಾದ ತಂತಿ ಸಂಪರ್ಕ ಕಡಿತಗೊಂಡು ವಿದ್ಯುತ್ ಹರಿಯುತ್ತಿತ್ತು. ಬಾಲಕ ಚಪ್ಪಲಿ ಧರಿಸದ ಕಾರಣ ಹಾಗೂ ನಿಂತಿದ್ದ ನೆಲವು ಮಳೆಯಿಂದ ಒದ್ದೆಯಾದ ಕಾರಣ ಹೋರ್ಡಿಂಗ್ ನಿಂದ ವಿದ್ಯುತ್ ಹರಿದು ಪ್ರಜ್ಞಾಹೀನನಾಗಿ ಬಿದ್ದಿದ್ದಾನೆ. ತಕ್ಷಣ ಆತನನ್ನು ಆಸ್ಪತ್ರೆಗೆ ಕರೆದೊಯ್ದರೂ ಬಾಲಕನನ್ನು ಬದುಕಿಸಲಾಗಲಿಲ್ಲ" ಎಂದು ಪೊಲೀಸರು ತಿಳಿಸಿದ್ದಾರೆ
ಬಾಲಕನ ಪೋಷಕರು ನೀಡಿದ ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲಿಸಲಾಗಿದೆ."ರಸ್ತೆಯ ಬದಿಯಲ್ಲಿ ಇರಿಸಲಾಗಿರುವ ಹೋರ್ಡಿಂಗ್ ಸಿಂಡಿಕೇಟ್ ಬ್ಯಾಂಕಿನ ಎಟಿಎಂನ ಜಾಹೀರಾತಾಗಿದೆ. ಆ ಸ್ಥಳದಲ್ಲಿ ಜಾಹೀರಾತು ಹೋರ್ಡಿಂಗ್ ಅಳವಡಿಸಲು ಬ್ಯಾಂಕ್ಗೆ ಅಗತ್ಯ ಅನುಮತಿ ಇದೆಯೇ ಎನ್ನುವುದು ಇನ್ನಷ್ಟೇ ತಿಳಿದುಬರಬೇಕಿದೆ " ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ. ಬಾಲಕನ ಪೋಷಕರ ದೂರಿನ ನಂತರ, ಬ್ಯಾಂಕ್ ಮ್ಯಾನೇಜರ್ ಮತ್ತು ನಿರ್ಲಕ್ಷ್ಯ ಮಾಡಿದ ತಮಿಳುನಾಡು ವಿದ್ಯುತ್ ಮಂಡಳಿಯ ಅಧಿಕಾರಿಗಳ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಚೆನ್ನೈ ನಲ್ಲಿ ಕಳೆದ ತಿಂಗಳಷ್ಟೇ ಅನಧಿಕೃತ ಹೋರ್ಡಿಂಗ್ ಒಂದು ದ್ವಿಚಕ್ರ ವಾಹನದಲ್ಲಿ ಸಾಗುತ್ತಿದ್ದ 23 ವರ್ಷದ ಮಹಿಳಾ ಟೆಕ್ಕಿ ಮೇಲೆ ಬಿದ್ದು ಸಾವನ್ನಪ್ಪಿದ್ದರು.