ಉತ್ತರಪ್ರದೇಶ,ಅ 20 (Daijiworld News/MSP): ತನ್ನ ಪತ್ನಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆಂದು ತಿಳಿದ ಪತಿರಾಯನೊಬ್ಬ, ಪೋನ್ ಮೂಲಕವೇ ತಲಾಖ್ ನೀಡಿದ್ದಾರೆ ಎಂದು ಆರೋಪಿಸಿ ಮಹಿಳೆಯೋರ್ವರು ಸಾಂಬಾಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸಂತ್ರಸ್ತ ಮಹಿಳೆ ಅಕ್ಟೋಬರ್ 11 ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಈ ವಿಚಾರವನ್ನು ತನ್ನ ಗಂಡನಿಗೆ ಪೋನ್ ಮೂಲಕ ವಿಷಯ ತಿಳಿಸಿದ್ದಾರೆ. ಆದರೆ ಅತ್ತ ಕಡೆಯಿಂದ ಹೆಣ್ಣು ಮಗುವೆಂದು ತಿಳಿದ ಗಂಡ ಫೋನ್ ನಲ್ಲೇ ತಲಾಖ್ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ದಂಪತಿಗೆ ಈಗಾಗಲೇ ನಾಲ್ಕು ಹೆಣ್ಣುಮಕ್ಕಳಿದ್ದಾರೆ.
11 ವರುಷಗಳ ಹಿಂದೆ ಕಮಿಲ್ ಎಂಬಾತನೊಂದಿಗೆ ಸಂತ್ರಸ್ತೆಯೂ ಮದುವೆಯಾಗಿದ್ದು, ಇದೀಗ ಮಹಿಳೆ ತವರು ಮನೆಯಲ್ಲಿದ್ದಾಳೆ. ಗಂಡನ ಮನೆಯವರೊಂದಿಗೆ ಹಲವು ವರ್ಷಗಳಿಂದ ಮನಸ್ತಾಪವಿತ್ತು ಎಂದು ಹೇಳಿಕೊಂಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಐಪಿಸಿ ಸೆಕ್ಷನ್ 147, 452,323,504 ಮತ್ತು ಮುಸ್ಲಿಂ ಮಹಿಳಾ ಕಾಯ್ದೆ( ಮದುವೆ ಹಕ್ಕು ರಕ್ಷಣೆ) ಯಡಿಯಲ್ಲಿ ದೂರು ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.