ನವದೆಹಲಿ,ಅ 20 (Daijiworld News/MSP): ಮಹಾತ್ಮ ಗಾಂಧಿಯವರ 150 ನೇ ಜನ್ಮ ದಿನಾಚರಣೆ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಶನಿವಾರ ಚಿತ್ರರಂಗದ ಗಣ್ಯರೊಂದಿಗೆ ಸಂವಾದ ನಡೆಸಿದರು.
ನವದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಲವಾರು, ಬಾಲಿವುಡ್ನ ಹಲವಾರು ಸೆಲೆಬ್ರಿಟಿಗಳು ಉಪಸ್ಥಿತರಿದ್ದರು. ಈ ವೇಳೆ ಮಹಾತ್ಮ ಗಾಂಧಿ ಮತ್ತು ಗಾಂಧೀಜಿಯ ಆದರ್ಶಗಳನ್ನು ಜನಪ್ರಿಯಗೊಳಿಸುವ ಚಲನಚಿತ್ರಗಳು ಮತ್ತು ದೂರದರ್ಶನ ಕಾರ್ಯಕ್ರಮಗಳನ್ನು ರಚಿಸಲು ಪ್ರಧಾನಿ ಕರೆ ನೀಡಿದರು.
ಇದೇ ವೇಳೆ ರಾಜ್ಕುಮಾರ್ ಹಿರಾನಿ ನಿರ್ದೇಶನದ ವಿಡಿಯೋವೊಂದನ್ನು ಪ್ರಧಾನಿ ಬಿಡುಗಡೆ ಮಾಡಿದ್ದು, ಇದರಲ್ಲಿ ಸಲ್ಮಾನ್ ಖಾನ್, ಶಾರುಖ್ ಖಾನ್, ಅಮೀರ್ ಖಾನ್, ಆಲಿಯಾ ಭಟ್, ರಣಬೀರ್ ಕಪೂರ್, ಸೋನಮ್ ಕಪೂರ್, ಕಂಗನಾ ರನೌತ್ ಮತ್ತು ವಿಕ್ಕಿ ಕೌಶಲ್ ಸೇರಿದಂತೆ ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಕಾಣಿಸಿಕೊಂಡಿದ್ದಾರೆ.
ಈ ಕಾರ್ಯಕ್ರಮದಲ್ಲಿ ಶಾರುಖ್ ಖಾನ್, ಅಮೀರ್ ಖಾನ್, ಕಂಗನಾ ರಾವಂತ್, ಜಾಕ್ವಲಿನ್ ಫರ್ನಾಂಡೀಸ್, ಇಮ್ತಿಯಾಜ್ ಅಲಿ, ಏಕ್ತಾ ಕಪೂರ್, ಅನುರಾಗ್ ಬಸು ಮತ್ತು ಬೋನಿ ಕಪೂರ್ ಮುಂತಾದ ಗಣ್ಯರು ಭಾಗವಹಿಸಿದ್ದರು.
"ಗಾಂಧಿ ಎಂದರೆ ಸರಳತೆ, ಅವರ ಆದರ್ಶ ಚಿಂತನೆಗಳು ವಿಶ್ವದೆಲ್ಲೆಡೆ ಹರಡಿಕೊಂಡಿದೆ. ಅವರ ಸೃಜನಶೀಲತೆಯ ಮನೋಭಾವವನ್ನು ನಾವು ಅಳವಡಿಸಿಕೊಳ್ಳುವುದು ಅತ್ಯಗತ್ಯ. ಮಹಾತ್ಮ ಗಾಂಧಿಯವರ ಆದರ್ಶಗಳನ್ನು ಮತ್ತಷ್ಟು ಜನಪ್ರಿಯಗೊಳಿಸಲು ಚಲನಚಿತ್ರ ರಂಗ ಕೆಲಸ ಮಾಡಬೇಕು ಎಂದು ಪ್ರಧಾನಿ ಕರೆ ನೀಡಿದರು.
"ಮಹಾತ್ಮ ಗಾಂಧಿಯವರ 150 ನೇ ಜನ್ಮ ದಿನಾಚರಣೆಯ ಕಾರ್ಯಕ್ರಮದ ಮೂಲಕ ನಮ್ಮೆಲ್ಲರನ್ನೂ ಒಂದುಗೂಡಿಸಿದ್ದಕ್ಕಾಗಿ ನಾನು ಪ್ರಧಾನಮಂತ್ರಿಗೆ ಧನ್ಯವಾದ ಹೇಳಲು ಬಯಸುತ್ತೇನೆ, ಗಾಂಧಿಜೀ ಅವರನ್ನು ಭಾರತ ಮತ್ತು ಜಗತ್ತಿಗೆ ಪುನಃ ಪರಿಚಯಿಸುವ ಅಗತ್ಯವಿದೆ ಎಂದು ನಾನು ಭಾವಿಸುತ್ತೇನೆ ಎಂದು ಶಾರುಖ್ ಹೇಳಿದರು.
ಪ್ರಧಾನ ಮಂತ್ರಿಯೊಂದಿಗೆ ನಾವಿಂದು ಅದ್ಭುತವಾದ ಸಂವಾದ ನಡೆಸಿದ್ದೇವೆ. ಅವರು ನಮ್ಮೆಲ್ಲರಿಗೂ ಸ್ಪೂರ್ತಿದಾಯಕ.. ಮೋದಿಜೀ ಅವರ ಈ ಚಿಂತನೆ ನಿಜಕ್ಕೂ ಪ್ರಶಂಸನೀಯ.ಎಂದು ಅಮೀರ್ ಖಾನ್ ಹೇಳಿದರು.