ಮೈಸೂರು, ಅ.20(Daijiworld News/SS): ಪ್ರವಾಹ ಬಂದು 60 ದಿನಗಳ ನಂತರ ಕೇಂದ್ರ ಪರಿಹಾರ ಬಿಡುಗಡೆ ಮಾಡಿರುವುದು ಬಹಳ ಕನಿಷ್ಠ ಹಣ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಪ್ರವಾಹ ಸಂತ್ರಸ್ತರಿಗೆ ಇನ್ನೂ ಬೆಳೆ ಪರಿಹಾರ ಕೂಡ ಕೊಟ್ಟಿಲ್ಲ. ಮನೆಗಳಿಗೆ ಪರಿಹಾರ ಕೊಟ್ಟಿಲ್ಲ. 10 ಸಾವಿರ ಹಣ 2 ಲಕ್ಷ ಮನೆಗಳಿಗೆ ಕೊಟ್ಟಿರೋದು ಬಿಟ್ಟರೆ ಪರಿಹಾರವೇ ಕೊಟ್ಟಿಲ್ಲ. ಕೇಂದ್ರ ಸರಕಾರ ಹಣ ಕೊಟ್ಟಿಲ್ಲ ರಾಜ್ಯ ಸರಕಾರವು ಖರ್ಚು ಮಾಡುತ್ತಿಲ್ಲ ಎಂದು ಹೇಳಿದರು.
ಜನಗಣತಿ ಜಾರಿ ವಿಚಾರ ಕುರಿತಾಗಿ ರಾಜ್ಯ ಸರಕಾರವನ್ನು ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡಿದ್ದು, ಜಾತಿಗಣತಿ ಜಾರಿಗೆ ತರಲು ರಾಜ್ಯ ಸರಕಾರಕ್ಕೆ ಆಸಕ್ತಿ ಇಲ್ಲ ಎಂದಿದ್ದಾರೆ. ಜಾತಿಗಣತಿ ವರದಿ ಸಿದ್ಧಪಡಿಸಿದ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷರಾಗಿದ್ದ ಕಾಂತರಾಜು ಸರಕಾರದ ಮುಖ್ಯ ಕಾರ್ಯದರ್ಶಿಗೆ ವರದಿ ಸಲ್ಲಿಸಿದ್ದರು. ಈಗ ಅವರು ಕರ್ತವ್ಯದಲ್ಲಿ ಇಲ್ಲ. ಸ್ವಾತಂತ್ರ್ಯ ಬಂದ ನಂತರ ಆಯಾ ಜಾತಿಯ ಆರ್ಥಿಕ, ಸಾಮಾಜಿಕ ಸ್ಥಿತಿಗತಿ ಏನು ಅಂತ ಅರ್ಥ ಮಾಡಿಕೊಳ್ಳಬೇಕಿತ್ತು. ಅದಕ್ಕಾಗಿಯೇ ಜಾತಿಗಣತಿ ಮಾಡಿಸಿದೆ. ಆ ವರದಿಯನ್ನು ಜಾರಿ ಮಾಡುವ ಇಚ್ಛಾಶಕ್ತಿ ಸರ್ಕಾರಕ್ಕೆ ಇಲ್ಲ ಎಂದು ಹೇಳಿದರು.
ಒಂದು ವೇಳೆ ಜಾತಿಗಣತಿ ವರದಿ ಜಾರಿ ಮಾಡದೇ ಇದ್ದರೆ ದಲಿತ, ಅಲ್ಪಸಂಖ್ಯಾತ, ಹಿಂದುಳಿದ ಸಮುದಾಯಗಳಿಗೆ ಅನ್ಯಾಯ ಮಾಡಿದಂತಾಗುತ್ತದೆ. ಆದರೆ, ಬಿಜೆಪಿಯವರಿಗೆ ಸಾಮಾಜಿಕ ನ್ಯಾಯದ ಕಮಿಟ್ಮೆಂಟ್ ಇಲ್ಲ. ಅಲ್ಪಸಂಖ್ಯಾತರಾದ ಮುಸ್ಲಿಂ, ಕ್ರಿಶ್ಚಿಯನ್ನರನ್ನು ಹತ್ತಿರಕ್ಕೆ ಸೇರಿಸುವುದಿಲ್ಲ. ದಲಿತರು, ಹಿಂದುಳಿದವರ ಅಭಿವೃದ್ಧಿ ಬೇಕಾಗಿಲ್ಲ ಎಂದು ಆರೋಪಿಸಿದರು.