ಹಾಸನ, ಅ 20 (Daijiworld News/MSP): 18 ವರ್ಷದಲ್ಲೇ ಮನೆ ಬಿಟ್ಟಿದ್ದ ಆಕೆ ಮತ್ತೆ ಪತ್ತೆಯಾಗಿದ್ದು ಶವವಾಗಿ..ಹಾಸನದ ಖಾಸಗಿ ಹೋಟೆಲ್ ಬಳಿ ಭಾನುವಾರ ಬೆಳಗ್ಗೆ ಅನುಮಾನಾಸ್ಪದವಾಗಿ ಈಕೆಯ ಮೃತ ದೇಹ ಸಿಕ್ಕಿದೆ. ಮೃತ ಯುವತಿಯನ್ನು ಭವಿತಾ(23) ಎಂದು ಗುರುತಿಸಲಾಗಿದೆ.
ಈಕೆ ಮೂಲತಃ ಅರಕಲಗೂಡಿನವಳಾಗಿದ್ದು, ಕಳೆದ 12 ದಿನಗಳಿಂದ ಬಿಎಂ ರಸ್ತೆಯಲ್ಲಿರುವ ಸರಾಯು ಹೋಟೆಲ್ ನಲ್ಲಿ ವಾಸ್ತವ್ಯ ಹೂಡಿದ್ದಳು. ಆದರೆ ಇಂದು ಬೆಳಗ್ಗೆ ಹೋಟೆಲ್ ಹಿಂಭಾಗ ಆಕೆಯ ಶವ ಪತ್ತೆಯಾಗಿದೆ.ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಪ್ರೀತಿಯ ವಿಚಾರವಾಗಿ ತನ್ನ 18 ವರ್ಷದಲ್ಲೇ ಮನೆ ಬಿಟ್ಟಿದ್ದ ಆಕೆಯನ್ನು ಪೊಲೀಸರು ಹುಡುಕಿದರೂ ತನ್ನ ಪೋಷಕರೊಂದಿಗೆ ಈಕೆ ಇರಲು ಇಚ್ಚಿಸಿರಲಿಲ್ಲ. ಅಂದಿನಿಂದ ಪೋಷಕರು ಕೂಡ ಆಕೆಯೊಂದಿಗೆ ಸಂಪರ್ಕ ಕಡಿದುಕೊಂಡಿದ್ದರು ಎನ್ನಲಾಗಿದೆ. ಅಲ್ಲದೆ ವಿದ್ಯಾಭ್ಯಾಸವನ್ನು ಮುಂದುವರಿಸಲಿಲ್ಲ ಎಂದು ತಿಳಿದುಬಂದಿದೆ.
ತನಿಖೆ ವೇಳೆ ಆಕೆಗೆ ಮೂವರು ಪ್ರಿಯಕರಿದ್ದರು ಎನ್ನುವ ವಿಚಾರ ತಿಳಿದು ಬಂದಿದೆ. ಈಕೆಯ ಕೈ ಹಾಗೂ ದೇಹದಲ್ಲಿ ಪುನೀತ್ ಎಂಬ ಹಚ್ಚೆ ಇದೆ. ಶನಿವಾರ ರಾತ್ರಿ ಪುನೀತ್ ಆಕೆ ಇದ್ದ ರೂಂಗೆ ಬಂದಿದ್ದಾನೆ ಎಂದು ತಿಳಿದುಬಂದಿದ್ದು ಪ್ರೀತಿ ವಿಚಾರವಾಗಿ ಇವರಿಬ್ಬರು ಜಗಳ ಮಾಡಿಕೊಂಡಿದ್ದಾರೆ. ಇದರಿಂದ ಬೇಸರ ಮಾಡಿಕೊಂಡು ಆಕೆಯೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೋ ಅಥವಾ ಪುನಿತ್ ಕೊಲೆ ಮಾಡಿದ್ದಾನೆಯೇ ಎಂದು ತಿಳಿದು ಬಂದಿಲ್ಲ.
ಸದ್ಯಕ್ಕೆ ಪೊಲೀಸ್ ಪುನಿತ್ ಜೊತೆ ಆತನ ಇಬ್ಬರು ಸ್ನೇಹಿತರನ್ನು ವಶಕ್ಕೆ ಪಡೆದ ವಿಚಾರಣೆ ನಡೆಸುತ್ತಿದ್ದಾರೆ.