ಬೆಂಗಳೂರು, ಅ.20(Daijiworld News/SS): ಗೂಬೆ ಕೂರಿಸುವದರಲ್ಲು ಸಿದ್ದರಾಮಯ್ಯನವರು ನಿಸ್ಸೀಮರು. ಕುಹಕದ ಮಾತು ಮತ್ತು ವಕ್ರ ಮಾತುಗಳನ್ನಾಡುವುದು ಅವರ ಕೆಲಸ. ಸಿದ್ದರಾಮಯ್ಯನವರು ಏನು ಅನ್ನೋದು ಕಾಂಗ್ರೆಸ್ಸಿವರಿಗೆ ಗೊತ್ತು ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ವಾಗ್ದಾಳಿ ನಡೆಸಿದ್ದಾರೆ.
ಸಿದ್ದರಾಮಯ್ಯ ಅವರಿಗೆ ಬೇರೆ ಕೆಲಸ ಇಲ್ಲ. ರಾತ್ರಿಯಲ್ಲ ನಿದ್ದೆಗೆಟ್ಟು ಏನ್ಮಾಡಬೇಕು ಅಂತ ಯೋಚನೆ ಮಾಡುತ್ತಿರುತ್ತಾರೆ. ಇತಿಹಾಸ ತಿರುಚುವ ಹೇಳಿಕೆ ನೀಡಿ ಅಪಹಾಸ್ಯಕ್ಕೆ ಈಡಾಗುತ್ತಿದ್ದಾರೆ. ಹಾಗಾಗಿ ಅವರು ಅಂಡಮಾನ್ಗೆ ಹೋಗಿ ವೀರ್ ಸಾವರ್ಕರ್ ವಾಸವಿದ್ದ ಜೈಲಿನ ಸ್ಥಿತಿಗತಿ ನೋಡಿಕೊಂಡು ಬರಬೇಕು. ಆಗ ಅವರಲ್ಲಿರುವ ಕೆಟ್ಟ ಬುದ್ಧಿ ಸರಿ ಹೋಗುತ್ತದೆ. ಒಮ್ಮೆ ಅಂಡಮಾನ್, ನಿಕೋಬಾರ್'ಗೆ ಹೋಗಿ ಸಾವರ್ಕರ ಬಗ್ಗೆ ತಿಳಿಯಲಿ. ಸಾರ್ವಜಿಕರಿಂದ ಹಣ ಪಡೆದು ಅವರನ್ನು ಕಳುಹಿಸಿಕೊಡುವ ವ್ಯವಸ್ಥೆ ಮಾಡೋಣ ಎಂದು ಹೇಳಿದರು.
ಚರಿತ್ರೆಯನ್ನು ಮತ್ತೆ ತಾನೇ ಬರೆಯುತ್ತೇನೆ ಎಂಬ ಹುಂಬುತನದ ಕೆಲಸ ಸರಿಯಲ್ಲ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಕಾಲದಲ್ಲಿ ವೀರ್ ಸಾವರ್ಕರ್ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದ್ದಾರೆ. ಹಾಗಾದರೆ ಇಂದಿರಾ ಗಾಂಧಿ ಸಿದ್ದರಾಮಯ್ಯನವರ ನಾಯಕರಲ್ಲವೇ..? ಸುಮ್ಮನೆ ಅವರ ಅಂಚೆ ಚೀಟಿ ಜಾರಿಗೆ ತರುತ್ತಿದ್ರಾ...? ಸಿದ್ದರಾಮಯ್ಯ ಅವರನ್ನು 5 ವರ್ಷ ಮುಖ್ಯಮಂತ್ರಿಯಾಗಿ ಸಹಿಸಿಕೊಂಡಿರುವುದೇ ದೊಡ್ಡ ವಿಚಾರ ಎಂದು ಹೇಳಿದರು.
ಡಾ.ಶಿವಕುಮಾರ ಸ್ವಾಮೀಜಿ ಅವರಿಗೆ ಭಾರತ ರತ್ನ ಕೊಡಬೇಕು ಎನ್ನುವುದು ನಮ್ಮದು ಆದ್ಯತೆ. ಆದರೆ ವೀರ್ ಸಾವರ್ಕರ್ ಅವರಿಗೆ ಭಾರತ ರತ್ನ ನೀಡುವ ವಿಚಾರವನ್ನು ಅದಕ್ಕೆ ತಳಕು ಹಾಕುವುದು ಸರಿಯಲ್ಲ. ಇಂತಹ ಮಾತುಗಳಿಂದ ಜನರ ತಲೆ ಹಾಳು ಮಾಡುವ ಪ್ರವೃತ್ತಿ ಯಾರಿಗೂ ಶೋಭೆ ತರುವಂತದ್ದಲ್ಲ ಎಂದು ದೂರಿದರು.