ನವದೆಹಲಿ, ಅ.20(Daijiworld News/SS): ಪಾಕ್ ಮೂಲದ ಜೈಷ್ ಎ ಮೊಹಮ್ಮದ್ ಉಗ್ರ ಸಂಘಟನೆ ದೀಪಾವಳಿ ವೇಳೆ ಸುಮಾರು 400ಕ್ಕೂ ಹೆಚ್ಚು ಪ್ರಮುಖ ಕಟ್ಟಡಗಳು ಹಾಗೂ ಜನನಿಬಿಡವಿರುವ ಮಾರುಕಟ್ಟೆ ಪ್ರದೇಶಗಳ ಮೇಲೆ ದಾಳಿ ನಡೆಸಲು ಯೋಜನೆ ರೂಪಿಸಬಹುದು ಎಂಬ ಕಾರಣಕ್ಕೆ ಮುನ್ನೆಚ್ಚರಿಕಾ ಕ್ರಮವಾಗಿ ದೆಹಲಿಯಲ್ಲಿ ಅಲರ್ಟ್ ಘೋಷಿಸಲಾಗಿದೆ.
ರಾಷ್ಟ್ರರಾಜಧಾನಿಗೆ ಉಗ್ರ ಭಯ ಇರುವ ಹಿನ್ನೆಲೆಯಲ್ಲಿ ಅಲರ್ಟ್ ಘೋಷಣೆ ಮಾಡಲಾಗಿದ್ದು ಭದ್ರತೆಯನ್ನು ಹೆಚ್ಚಿಸಲಾಗಿದೆ. ಈ ಬಗ್ಗೆ ಹೇಳಿಕೆ ನೀಡಿರುವ ನವದೆಹಲಿ ಡಿಸಿಪಿ, ಉಗ್ರದಾಳಿಯ ಬಗ್ಗೆ ನಮಗೆ ಗುಪ್ತಚರ ಇಲಾಖೆ ಯಾವುದೇ ಮಾಹಿತಿ ನೀಡಿಲ್ಲ ಅಥವಾ ಬೆದರಿಕೆಗಳೂ ಬಂದಿಲ್ಲ. ಆದರೂ ದೀಪಾವಳಿ ಹಿನ್ನೆಲೆಯಲ್ಲಿ ಜನನಿಬಿಡತೆ ಜಾಸ್ತಿ ಇರುವ ಕಾರಣ ನಗರದಲ್ಲಿ ಭದ್ರತೆ ಹೆಚ್ಚಿಸಿದ್ದೇವೆ ಎಂದು ತಿಳಿಸಿದ್ದಾರೆ.
ನವದೆಹಲಿಯ ಒಟ್ಟು 15 ಜಿಲ್ಲೆಗಳಲ್ಲಿ ಎಂಟು ಜಿಲ್ಲೆಗಳ ಮೇಲೆ ಉಗ್ರರ ಕಣ್ಣಿದೆ ಎನ್ನಲಾಗಿದ್ದು ಅಲ್ಲೆಲ್ಲ ಭದ್ರತೆಯನ್ನು ಹೆಚ್ಚಿಸಲಾಗಿದೆ. ಅವುಗಳನ್ನು ಸೂಕ್ಷ್ಮಪ್ರದೇಶಗಳೆಂದು ಪರಿಗಣಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಕೊನಾಟ್ ಪ್ರದೇಶ ಮತ್ತು ಖಾನ್ ಮಾರ್ಕೆಟ್ಗಳೂ ಕೂಡ ಉಗ್ರರ ಲಿಸ್ಟ್ನಲ್ಲಿವೆ. ಪ್ರಧಾನಮಂತ್ರಿ ಕಚೇರಿ, ಸೇನಾ ಭವನ, ಪಾರ್ಲಿಮೆಂಟ್ ಹೌಸ್ (ಸಂಸತ್ತು), ರಾಷ್ಟ್ರಪತಿ ಭವನಗಳಿಗೆ ಸದಾ ಬಿಗಿ ಭದ್ರತೆ ಇರುತ್ತದೆ. ಅಲ್ಲದೆ ಜಾಮಾ ಮಸೀದಿ, ದೆಹಲಿ ಪೊಲೀಸ್ ಮುಖ್ಯಕಚೇರಿ, ರೌಸ್ ಅವೆನ್ಯೂ ನ್ಯಾಯಾಲಯ, ಲಕ್ಷ್ಮೀನಗರ, ಪ್ರೀತ್ ವಿಹಾರ್, ಆನಂದ್ ವಿಹಾರ್ಗಳನ್ನೂ ಕೂಡ ಭಯೋತ್ಪಾದಕರು ಟಾರ್ಗೆಟ್ ಮಾಡಬಹುದು ಎಂದು ಅವರು ಹೇಳಿದ್ದಾರೆ.